ವಾಷಿಂಗ್ಟನ್: ನಾಸಾ(NASA) ಮತ್ತು ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಉಡಾವಣೆ ಮಾಡಿರುವ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು(ಕ್ರ್ಯೂ-10) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ವನ್ನು ತಲುಪಿದ್ದು, ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ 9.34ಕ್ಕೆ ಸರಿಯಾಗಿ ಡಾಕಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸ್ಟಾರ್ ಲೈನರ್ ಕ್ಯಾಪ್ಸ್ಯೂಲ್ ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಕಳೆದ 9 ತಿಂಗಳಿಂದ ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್(Sunita Williams) ಮತ್ತು ಬುಚ್ ವಿಲ್ಮೋರ್ ಅವರನ್ನು ಇದು ಮರಳಿ ಕರೆತರಲಿದೆ.
ಕ್ರ್ಯೂ-10ನಲ್ಲಿ ಒಟ್ಟು ನಾಲ್ವರು ಗಗನಯಾತ್ರಿಕರು ತೆರಳಿದ್ದು, ಇವರೆಲ್ಲರೂ ಕೆಲವು ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇರಲಿದ್ದಾರೆ. ಇವರು ಐಎಸ್‌ಎಸ್ ತಲುಪಿದೊಡನೆ ಅಲ್ಲಿರುವ ಸುನೀತಾ ಸೇರಿದಂತೆ ಇತರೆ ಗಗನಯಾತ್ರಿಕರು ಇವರನ್ನು ಆದರದಿಂದ ಆಲಿಂಗಿಸಿಕೊಂಡು ಸ್ವಾಗತಿಸಿದ್ದಾರೆ.
ನಾಸಾದ ಫ್ಲೋರಿಡಾದಲ್ಲಿನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ ಎಕ್ಸ್ ನ ಫಾಲ್ಕನ್ 9 ರಾಕೆಟ್ ನಾಲ್ಕು ಗಗನಯಾತ್ರಿಗಳನ್ನು ಹೊತ್ತು ಶುಕ್ರವಾರ ರಾತ್ರಿ ನಭಕ್ಕೆ ಚಿಮ್ಮಿತ್ತು. ಮಾರ್ಚ್ 16 ರಂದು ಬೆಳಿಗ್ಗೆ 9:35 ಕ್ಕೆ ಐಎಸ್ಎಸ್‌ನಲ್ಲಿ ಇದು ಯಶಸ್ವಿಯಾಗಿ ಬಂದಿಳಿದಿದ್ದು, ಬಾಹ್ಯಾಕಾಶ ನೌಕೆಯು ಪ್ರಮಾಣಿತ ಸೋರಿಕೆ ಮತ್ತು ಒತ್ತಡದ ತಪಾಸಣೆಯ ಬಳಿಕ ಅದರ ಬಾಗಿಲನ್ನು (ಹ್ಯಾಚ್) ತೆರೆಯಲಾಯಿತು.
ಪ್ರೀತಿಯ ಸ್ವಾಗತ
ಭಾರತೀಯ ಕಾಲಮಾನ ಬೆಳಿಗ್ಗೆ 11:05ಕ್ಕೆ ಹ್ಯಾಚ್ ಅನ್ನು ತೆರೆಯಲಾಯಿತು, ನಂತರ ಹೊಸ ನಾಸಾ ಸಿಬ್ಬಂದಿ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿ ಸುನೀತಾ ವಿಲಿಯಮ್ಸ್, ವಿಲ್ಮೋರ್ ಮತ್ತು ಎಕ್ಸ್‌ಪೆಡಿಷನ್ 72ರ ಇತರೆ ಸದಸ್ಯರನ್ನು ಭೇಟಿಯಾದರು.
ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿ ಪ್ರಯಾಣಿಸಿದ ನಾಲ್ವರು ಗಗನಯಾತ್ರಿಗಳ ಬದಲಿಗೆ ರಷ್ಯಾದ ರೋಸ್ಕೋಸ್ಮೋಸ್ನ ಗಗನಯಾತ್ರಿ ಮಿಷನ್ ಸ್ಪೆಷಲಿಸ್ಟ್ ಕಿರಿಲ್ ಪೆಸ್ಕೊವ್, ಯುಎಸ್ನ ಪೈಲಟ್ ನಿಕೋಲ್ ಅಯರ್ಸ್ ಮತ್ತು ಕಮಾಂಡರ್ ಅನ್ನೆ ಮೆಕ್ಲೈನ್ ಮತ್ತು ಜಪಾನ್ನ ಜಾಕ್ಸಾದ ಮಿಷನ್ ಸ್ಪೆಷಲಿಸ್ಟ್ ಟಕುಯಾ ಒನಿಶಿ.
ಈಗ ಬಂದಿಳಿದಿರುವ ಅಮೆರಿಕ, ರಷ್ಯಾ ಮತ್ತು ಜಪಾನ್‌ನ ಇಬ್ಬರು ಸೇರಿದಂತೆ ಒಟ್ಟು 4 ಗಗನಯಾತ್ರಿಕರು ಮುಂಬರುವ ಕೆಲವು ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಇದ್ದು, ಅದರ ಒಳ ಹೊರಗನ್ನು ಕಲಿಯಲಿದ್ದಾರೆ. ಬಳಿಕ ಅವರನ್ನೂ ಭೂಮಿಗೆ ವಾಪಸ್ ಕರೆತರಲಾಗುತ್ತದೆ.
ಕ್ರ್ಯೂ-10 ಆರು ತಿಂಗಳ ಕಾಲ ಐಎಸ್ಎಸ್‌ನಲ್ಲಿ ಉಳಿಯುವ ನಿರೀಕ್ಷೆಯಿದೆ. ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್‌ರನ್ನು ಸೇರಿಸಿದರೆ ಐಎಸ್‌ಎಸ್ ನಲ್ಲಿರುವ ಒಟ್ಟು ಗಗನಯಾತ್ರಿಗಳ ಸಂಖ್ಯೆ ಈಗ 11 ಕ್ಕೇರಿದಂತಾಗಿದೆ.
ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ವಾಪಸಾಗೋದು ಎಂದು?
9 ತಿಂಗಳ ಕಾಲ ಬಾಹ್ಯಾಕಾಶದಲ್ಲೇ ಕಳೆದಿರುವ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಬುಧವಾರ ಮುಂಜಾನೆ 4 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿದ್ದಾರೆ. ಅವರೊಂದಿಗೆ ನಾಸಾ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ ಕೂಡ ಕ್ರ್ಯೂ ಡ್ರ್ಯಾಗನ್ ನೌಕೆಯಲ್ಲಿ ಭೂಮಿಗೆ ವಾಪಸಾಗಲಿದ್ದಾರೆ ಎಂದು ನಾಸಾ ತಿಳಿಸಿದೆ.