ಮುಂಬೈ: ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದಲ್ಲೂ ಉತ್ತರ ಪ್ರದೇಶದ ‘ಯೋಗಿ ಮಾಡೆಲ್’ ಅನುಸರಿಸಿದ್ದಾರೆ. ಮಾರ್ಚ್ 17ರಂದು ನಾಗ್ಪುರದಲ್ಲಿ ನಡೆದ ಹಿಂಸಾಚಾರ (Nagpur Violence), ಗಲಭೆಯ ಆರೋಪಿ ಫಹೀಂ ಖಾನ್ ಎಂಬಾತನ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳ ವಿರುದ್ಧ ಯೋಗಿ ಆದಿತ್ಯನಾಥ್ ಬಳಸುವ ಅಸ್ತ್ರವನ್ನೇ ಮಹಾರಾಷ್ಟ್ರ (Maharashtra) ಸರ್ಕಾರ ಕೂಡ ಬಳಸಿದಂತಾಗಿದೆ.
ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ (ಎನ್ಎಂಸಿ) ಅಧಿಕಾರಿಗಳು ಸೋಮವಾರ ಬೆಳಗ್ಗೆ ಬುಲ್ಡೋಜರ್ ಮೂಲಕ ಫಹೀಂ ಖಾನ್ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಸಂಜಯ್ ಬಾಗ್ ಕಾಲೋನಿಯಲ್ಲಿರುವ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಇದಕ್ಕೂ ಮೊದಲು ನೋಟಿಸ್ ನೀಡಲಾಗಿತ್ತು. ಈಗ ಮನೆಯನ್ನು ನೆಲಸಮ ಮಾಡಲಾಗಿದೆ.

ಮಾರ್ಚ್ 17ರಂದು ನಡೆದ ಗಲಭೆ, ಗಲಾಟೆಗೆ ಫಹೀಂ ಖಾನ್ ಮಾಸ್ಟರ್ ಮೈಂಡ್ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಈತನು ಮೈನಾರಿಟಿ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಸ್ಥಳೀಯ ಮುಖಂಡನೂ ಆಗಿದ್ದು, ಪ್ರಚೋದನಾತ್ಮಕ ಭಾಷಣ ಮಾಡಿದ ಬಳಿಕವೇ ಗಲಭೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈತನು ಜೈಲಿನಲ್ಲಿದ್ದಾನೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾಗ್ಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ನಿತಿನ್ ಗಡ್ಕರಿ ವಿರುದ್ಧ ಸೋಲನುಭವಿಸಿದ್ದ.
ಏನಿದು ಪ್ರಕರಣ?
ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಮೊಘಲ್ ದೊರೆ ಔರಂಗಜೇಬನ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದೇ ವೇಳೆ ಮಾರ್ಚ್ 17ರಂದು ಕುರಾನ್ ಸುಡಲಾಗಿದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇದು ಕೋಮುಗಲಭೆಗೂ ಕಾರಣವಾಗಿತ್ತು. ನಗರದ ಹಲವು ಭಾಗಗಳಲ್ಲಿ ಭಾರಿ ಕಲ್ಲು ತೂರಾಟ ನಡೆದಿದ್ದು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
ಭಾರಿ ಘರ್ಷಣೆ ವೇಳೆ ಮೂವರು ಉಪ ಪೊಲೀಸ್ ಆಯುಕ್ತರ ಮಟ್ಟದ ಅಧಿಕಾರಿಗಳು ಸೇರಿದಂತೆ 33 ಪೊಲೀಸರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 100ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಮತ್ತೊಂದೆಡೆ, ಹಿಂಸಾಚಾರದ ಸಮಯದಲ್ಲಿ ಹಾನಿಗೊಳಗಾದ ಆಸ್ತಿಗಳ ಬೆಲೆಯನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು ಮತ್ತು ಪಾವತಿಸದಿದ್ದರೆ, ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದರು.