ಕಾನೂನು ಕುಣಿಕೆಯಿಂದ ಖರ್ಗೆಗೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಎನ್. ಆರ್. ರಮೇಶ್ ಮಾಧ್ಯಮಕ್ಕೆ ಪತ್ರದ ಮೂಲಕ ತಿಳಿಸಿದ್ದಾರೆ.
ಮಾಧ್ಯಮದ ಆತ್ಮೀಯರೇ,
ವಿಷಯ: CA ನಿವೇಶನ ವಾಪಸ್ಸು ನೀಡಿದ ಮಾತ್ರಕ್ಕೆ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
AICC ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ವರ್ಗದವರೇ ಸದಸ್ಯರುಗಳಾಗಿರುವ “ಸಿದ್ಧಾರ್ಥ ವಿಹಾರ ಟ್ರಸ್ಟ್” ಹೆಸರಿಗೆ “ಶೈಕ್ಷಣಿಕ ಉದ್ದೇಶ” ಎಂಬ ಹೆಸರಿನಲ್ಲಿ ಒಂದೇ ಉದ್ದೇಶಕ್ಕೆ “BDA” ಮತ್ತು “KIADB” ಸಂಸ್ಥೆಗಳಿಂದ ಪ್ರತ್ಯೇಕವಾಗಿ ಬೆಂಗಳೂರು ಮಹಾನಗರದ 02 ಬೃಹತ್ CA ನಿವೇಶನಗಳನ್ನು ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಮಂಜೂರು ಮಾಡಿಸಿಕೊಂಡಿರುವ ಹಗರಣಕ್ಕೆ ಸಂಬಂಧಿಸಿದಂತೆ ದಿನಾಂಕ 27/09/2024 ರಂದು ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸಲಾಗಿತ್ತು.

ಅಲ್ಲದೇ, ಈ ಸಂಬಂಧ ಕಾನೂನು ಹೋರಾಟ ನಡೆಸಲು ಮತ್ತು ಪ್ರಕರಣವನ್ನು ದಾಖಲಿಸಿಕೊಳ್ಳಲು “Prosecution Permission” ನೀಡುವಂತೆ ಘನತೆವೆತ್ತ ರಾಜ್ಯಪಾಲರಿಗೆ ಸಂಪೂರ್ಣ ದಾಖಲೆಗಳೊಂದಿಗೆ ಮನವಿಯನ್ನೂ ಸಹ ಮಾಡಿಕೊಳ್ಳಲಾಗಿತ್ತು.
ಇದೇ October 16 ಅಥವಾ 17 ರಂದು ಸಮಯವನ್ನು ನೀಡುವಂತೆಯೂ ಸಹ ಘನತೆವೆತ್ತ ರಾಜ್ಯಪಾಲರನ್ನು ಮನವಿ ಮಾಡಿಕೊಳ್ಳಲಾಗಿದೆ.
ಈಗಾಗಲೇ “ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ”ದಿಂದ 2014 ರಲ್ಲಿ ಬೆಂಗಳೂರಿನ ಪ್ರತಿಷ್ಟಿತ ಬಡಾವಣೆ ಬಿಟಿಎಂ 4ನೇ ಹಂತದ 2ನೇ ಬ್ಲಾಕ್ ನ 02 ಎಕರೆಗಳಷ್ಟು ವಿಸ್ತೀರ್ಣದ CA ನಿವೇಶನ ಸಂಖ್ಯೆ – 05 ಅನ್ನು “ಸಿದ್ಧಾರ್ಥ ವಿಹಾರ ಟ್ರಸ್ಟ್” ಹೆಸರಿಗೆ “ಶೈಕ್ಷಣಿಕ ಉದ್ದೇಶ”ಕ್ಕೆಂದು ಪಡೆದಿದ್ದ ಖರ್ಗೆ ಕುಟುಂಬ ಆ ವಿಷಯವನ್ನು ಮರೆಮಾಚಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ “ಅದೇ ಶೈಕ್ಷಣಿಕ ಉದ್ದೇಶ”ಕ್ಕೆಂದು KIADB ಯು ಯಲಹಂಕ ಬಳಿಯ ಬಾಗಲೂರಿನಲ್ಲಿ ಅಭಿವೃದ್ಧಿಪಡಿಸಿರುವ “Hi – Tech Defence & Aerospace Park” ನ Hardware Sector ನಲ್ಲಿ 05 ಎಕರೆಗಳಷ್ಟು ವಿಸ್ತೀರ್ಣದ AM – 4 ಸಂಖ್ಯೆಯ CA ನಿವೇಶನವನ್ನು ಪಡೆದುಕೊಂಡಿರುವ ಬಗ್ಗೆ ದಾಖಲೆಗಳ ಸಹಿತ ದೂರನ್ನು ಲೋಕಾಯುಕ್ತದಲ್ಲಿ ಸಲ್ಲಿಸಲಾಗಿದೆ.
ಸುಮಾರು 250 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ 02 ನಿವೇಶನಗಳನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದ ಖರ್ಗೆ ಕುಟುಂಬದ ಮಲ್ಲಿಕಾರ್ಜುನ ಖರ್ಗೆ, ರಾಧಾಬಾಯಿ M. ಖರ್ಗೆ, ಪ್ರಿಯಾಂಕ M. ಖರ್ಗೆ, ರಾಹುಲ್ M. ಖರ್ಗೆ, ರಾಧಾಕೃಷ್ಣ ಮತ್ತು ನಿಯಮಗಳನ್ನು ಪಾಲಿಸದೆ ಖರ್ಗೆ ಕುಟುಂಬದ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಎರಡನೇ ನಿವೇಶನವನ್ನು ಒಂದೇ ಉದ್ದೇಶಕ್ಕೆ ಮಂಜೂರು ಮಾಡಿದ ಕಾರಣದಿಂದ ಬೃಹತ್ ಕೈಗಾರಿಕೆ ಸಚಿವ M. B. ಪಾಟೀಲ್ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ|| ಎಸ್. ಸೆಲ್ವಕುಮಾರ್, IAS ಹಾಗೂ KIADB ಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರ್ಬಳಕೆ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಭೂ ಕಬಳಿಕೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಮುಂದಿನ ಮೂರ್ನಾಲ್ಕು ದಿನದೊಳಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರನ್ನೂ ಸಹ ಸಲ್ಲಿಸಲಾಗುತ್ತಿದ್ದು, ಘನತೆವೆತ್ತ ರಾಜ್ಯಪಾಲರನ್ನು ಖುದ್ದಾಗಿ ಭೇಟಿ ಮಾಡಿ ದಾಖಲೆಗಳ ಸಹಿತ ಅವರಿಗೆ ವಸ್ತು ಸ್ಥಿತಿಯನ್ನು ವಿವರಿಸಿ ಈ ಬೃಹತ್ ವಂಚನೆ ಮತ್ತು ಬೃಹತ್ ಭೂ ಕಬಳಿಕೆಗೆ ಸಂಬಂಧಿಸಿದಂತೆ “Prosecution Permission” ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.
ಪ್ರಸ್ತುತ ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕೆ ಕುತ್ತಾಗಬಹುದು ಎಂಬ ಏಕೈಕ ದುರಾಲೋಚನೆಯಿಂದ ಮಾತ್ರವೇ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ಯವರು ಈ “KIADB” ಯ ಸ್ವತ್ತನ್ನು ವಾಪಸ್ಸು ನೀಡಲು ಮುಂದಾಗಿರುವುದು ಅತ್ಯಂತ ಸ್ಪಷ್ಟ.
ಈ ಮೋದಲೇ ತಮ್ಮ “ಸಿದ್ಧಾರ್ಥ ವಿಹಾರ ಟ್ರಸ್ಟ್” ಹೆಸರಿಗೆ “ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ”ದಿಂದ 02 ಎಕರೆಗಳಷ್ಟು ವಿಸ್ತೀರ್ಣದ 150 ಕೋಟಿಗೂ ಹೆಚ್ಚು ಮೌಲ್ಯದ CA ನಿವೇಶನ ಹಂಚಿಕೆಯಾಗಿದ್ದ ವಿಷಯವನ್ನು ಮರೆಮಾಚಿ ಮತ್ತೊಮ್ಮೆ ಅದೇ “ಸಿದ್ಧಾರ್ಥ ವಿಹಾರ ಟ್ರಸ್ಟ್” ಹೆಸರಿಗೆ ಅದೇ ಶೈಕ್ಷಣಿಕ ಉದ್ದೇಶಕ್ಕೆಂದು “KIADB” ಮೂಲಕ 110 ಕೋಟಿಗೂ ಹೆಚ್ಚು ಮೌಲ್ಯದ 05 ಎಕರೆಗಳಷ್ಟು ವಿಸ್ತೀರ್ಣದ CA ನಿವೇಶನವನ್ನು ಮಂಜೂರು ಮಾಡಿಸಿಕೊಂಡಿರುವುದು ಕಾನೂನು ರೀತ್ಯಾ ಅತ್ಯಂತ ಗಂಭೀರವಾದ ಅಪರಾಧ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಖರ್ಗೆ ಕುಟುಂಬ ಈ ಸರ್ಕಾರಿ ಭೂ ಕಬಳಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾನೂನು ಕುಣಿಕೆಯಿಂದ ಪಾರಾಗಲು ಸಾಧ್ಯವೇ ಇಲ್ಲ ಎಂಬ ಮಾಹಿತಿಯನ್ನು ತಿಳಿಸಲಿಚ್ಛಿಸುತ್ತೇನೆ.
ಇದೇ ವಾರದಲ್ಲಿ ಘನತೆವೆತ್ತ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದು, ಸಂಪೂರ್ಣ ವಿವರಗಳನ್ನು ನೀಡಲಾಗುವುದು ಎಂದೂ ಸಹ ತಮಗೆ ಹೇಳಲಿಚ್ಛಿಸುತ್ತೇನೆ.