ಮೈಸೂರು: ಮನೆ ಕಟ್ಟಲು ಪಡೆದಿದ್ದ ಸಾಲ ತೀರಿಸಲಾಗದೇ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ನಗರದ ಹೊಸ ಬಡಾವಣೆಯಲ್ಲಿ ನಡೆದಿದೆ.
ಎಂ. ಚಂದ್ರಶೇಖರ್(35) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯೋಧ.
ಚಂದ್ರಶೇಖರ್, ಬೆಂಗಳೂರಿನ R.T. ನಗರದ ಪ್ಯಾರಾಚೂಟ್ ರೆಜಮೆಂಟ್‌ನ ಯೋಧರಾಗಿದ್ದು, ಹುಣಸೂರಿನ ಹೊಸ ಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಹೊಸದಾಗಿ ಮನೆ ನಿರ್ಮಿಸಿದ್ದರು. ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿದ್ದರು ಎನ್ನಲಾಗಿದೆ.
15 ವರ್ಷಗಳಿಂದ ಜಮ್ಮುಕಾಶ್ಮೀರ, ಆಗ್ರಾ, ಚೀನಾ ಗಡಿ ಸೇರಿ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದ ಚಂದ್ರಶೇಖರ್, ಒಂದು ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದರು. ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ಅವರು ವಾಪಸ್ಸು ತೆರಳಬೇಕಿತ್ತು. ಆದರೆ ಮನೆಗಾಗಿ ಮಾಡಿರುವ ಸಾಲ ತೀರಿಸಲಾಗದೆ ಚಂದ್ರಶೇಖರ್ ಪರದಾಟ ನಡೆಸುತ್ತಿದ್ದರು. ಇದರಿಂದಾಗಿ ಮನ ನೊಂದಿದ್ದ ಅವರು, ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಚಂದ್ರಶೇಖರ್ ಅವರ ಆತ್ಮಹತ್ಯೆಯಿಂದಾಗಿ ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ನೀರವ ಮೌನ ಆವರಿಸಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಈ ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.