ಮಹಾರಾಜ ಟ್ರೋಫಿ ಫೈನಲ್ ಪಂದ್ಯ ಗೆದ್ದು ಮೈಸೂರು ವಾರಿಯರ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ನ್ನು 45 ರನ್ ಗಳಿಂದ ಮಣಿಸಿ ಮೊದಲ ಬಾರಿಗೆ ಮಹಾರಾಜ ಟ್ರೋಫಿಗೆ ಮುತ್ತಿಕ್ಕಿತು. ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ ಸೋಲು ಕಂಡಿತು.
ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೈಸೂರು ಬ್ಯಾಟಿಂಗ್ ಗೆ ಇಳಿಯಿತು. ಮೈಸೂರು ಪರ ಆರಂಭಿಕ ಕಾರ್ತಿಕ್ ಸಿ 3 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಂತರ ಕಾರ್ತಿಕ್ ಎಸ್ ಯು ಅವರಿಗೆ ಜೊತೆಯಾದ ನಾಯಕ ಕರುಣ್ ಎ 80ಕ್ಕೂ ಅಧಿಕ ರನ್ ಗಳ ಜೊತೆಯಾಟ ನೀಡಿದರು. ಕಾರ್ತಿಕ್ 44 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 77 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
4ನೇ ಕ್ರಮಾಂಕದಲ್ಲಿ ಬಂದ ಹರ್ಷಿಲ್ 6 ರನ್ ಗಳಿಸಿದರು. ನಾಯಕ ಕರುಣ್ 45 ಎಸೆತಗಳಲ್ಲಿ 66 ರನ್ ಗಳಿಸಿದರು. ನಂತರ ಮನೋಜ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಮನೋಜ್ 13 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿದರು. ಹೀಗಾಗಿ ತಂಡವು ಬೃಹತ್ ಮೊತ್ತ ಗಳಿಸುವಂತಾಯಿತು.
207 ರನ್ ಗಳ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಬಹುದು ಎನ್ನಲಾಗಿತ್ತು. ಆದರೆ, ಅದು ಸೋಲೊಪ್ಪಿಕೊಂಡಿತು. ಯಾವ ಬ್ಯಾಟ್ಸಮನ್ ಗಳು ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು. ಎಲ್.ಆರ್. ಚೇತನ್ ಮಾತ್ರ 32 ಎಸೆತಗಳಲ್ಲಿ 51 ರನ್ ಗಳಿಸಿ ಹೋರಾಟ ನಡೆಸಿದರು. ಆದರೆ, ಅವರ ಹೋರಾಟ ಕೂಡ ವ್ಯರ್ಥವಾಯಿತು. ಕೊನೆಗೂ ಮೈಸೂರು ತಂಡ ಗೆದ್ದು ಬೀಗಿದ್ದು, ಮೊದಲ ಬಾರಿಗೆ ಟ್ರೋಫಿ ಕೈಗೆತ್ತಿಕೊಂಡಿದೆ.