ನೇಪಿಟಾವ್: ಮ್ಯಾನ್ಮಾರ್ (Myanmar Earthquake) ಮತ್ತು ಥಾಯ್ಲೆಂಡ್ (Thailand) ಬ್ಯಾಂಕಾಕ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪವನ್ನು ವಿಜ್ಞಾನಿಗಳು ಬರೋಬ್ಬರಿ 334 ಅಣು ಬಾಂಬ್ ಗಳಿಗೆ ಹೋಲಿಕೆ ಮಾಡಿದ್ದಾರೆ. ಅದರ ಭಯಾನಕತೆ ಕೇಳಿ ಈಗ ಜನರು ಬೆಚ್ಚಿ ಬಿದ್ದಿದ್ದಾರೆ.
ಈ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಸಾವು-ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಭೂಕಂಪನ ಬಗ್ಗೆ ಅಧ್ಯಯನಗಳು ನಡೆಯುತ್ತಿದ್ದು, ಮ್ಯಾನ್ಮಾರ್‌ನಲ್ಲಿ ಆದ ಕಂಪನದ ಬಗ್ಗೆ ವಿಜ್ಞಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪವು ದೇಶದ ಮಧ್ಯಭಾಗವನ್ನು ನಾಶ ಮಾಡಿದೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 1,644ಕ್ಕೆ ಏರಿಕೆಯಾಗಿದ್ದು, 3,408ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ರಕ್ಷಣಾ ಕಾರ್ಯಗಳು ಭರದಿಂದ ಸಾಗುತ್ತಿವೆ. ಭೂಕಂಪದ ತೀವ್ರತೆಯನ್ನು 334 ಅಣುಬಾಂಬ್ ಗಳ ಶಕ್ತಿಗೆ ಸಮಾನವಾಗಿದೆ ಎಂದು ಅಮೆರಿಕದ ಭೂವಿಜ್ಞಾನಿ ಜೆಸ್ ಫೀನಿಕ್ಸ್ ಹೇಳಿದ್ದಾರೆ.
ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ಸಹ ಒಂದು ನಿರ್ಮಾಣ ಹಂತದ ಗಗನಚುಂಬಿ ಕಟ್ಟಡ ಕುಸಿದು 20ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಶುಕ್ರವಾರದಂದು 10 ಗಂಟೆಗಳ ಅವಧಿಯಲ್ಲಿ ಒಟ್ಟು 15 ಭೂಕಂಪಗಳು ಸಂಭವಿಸಿವೆ. ಅಲ್ಲದೇ, ಈ ತಿಂಗಳು ಪೂರ್ತಿ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.