ರಾಮನಗರ: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯ ನಂತರ ಮಾತನಾಡಿದ ಅವರು, ನಮ್ಮ ಜತೆಯಲ್ಲೇ ಇದ್ದು ಸೋಲಿಸಿ, ಕತ್ತು ಕೊಯ್ದಿದ್ದಾರೆ. ಆದರೆ, ಈಗ ಅವರೇ ಸೋತಿದ್ದಾರೆ. ಸೋತ ನಂತರ ಕುಮಾರಸ್ವಾಮಿ ಅವರಿಗೆ ಸವಾಲು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆದರೆ, ಇಂತಹ ಸವಾಲುಗಳಿಗೆ ಕುಮಾರಸ್ವಾಮಿ ಹೆದರುವುದಿಲ್ಲ. ಇಂತಹ ಸವಾಲುಗಳನ್ನೇ ಮೆಟ್ಟಿ ನಿಂತು ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಸವಾಲುಗಳಿಗೆ ಹೆದರಿ ಓಡುವವರಲ್ಲ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಡಿಕೆಶಿ ಅವರು ಹತಾಶರಾಗಿರುವುದು ಅವರ ಮಾತುಗಳಿಂದಲೇ ಎದ್ದು ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ನಿಮಗೆ ಸಂಪೂರ್ಣ ಸಹಕಾರ ಕೊಟ್ಟಿದ್ದರು. ನಿಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಲು ಆಗ ನಾವು ಹೇಗೆ ನಡೆದುಕೊಂಡೆವು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ನಮ್ಮನ್ನು ವಿರೋಧಿಸುತ್ತಿರಿ. ಆಗ ಬೇಕು, ಈಗ ಬೇಡ. ಆದರೆ, ನಮ್ಮ ಸಹಕಾರವನ್ನು ನೀವು ಯಾವಾಗಲೂ ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.