ಪಣಜಿ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಗೋವಾ ಪ್ರವೇಶಕ್ಕೆ ಇದ್ದ ನಿರ್ಬಂಧ 10 ವರ್ಷಗಳ ಬಳಿಕ ತೆರವಾಗಿದೆ. 2014ರಲ್ಲಿ ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸರ್ಕಾರವು ಗೋವಾ ಪ್ರವೇಶಕ್ಕೆ ನಿರ್ಬಂಧಿಸಿ ಮುತಾಲಿಕ್‌ಗೆ ವಿಧಿಸಿದ್ದ ನಿರ್ಬಂಧವನ್ನು ಈಗ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸರ್ಕಾರ ಹಿಂಪಡೆದಿದೆ. ಹೀಗಾಗಿ ಮುತಾಲಿಕ್ ಅವರಿಗೆ ದಶಕದ ಬಳಿಕ ಗೋವಾ ಪ್ರವೇಶಕ್ಕೆ ಅನುಮತಿ ಸಿಕ್ಕಂತಾಗಿದೆ.
ನಿರ್ಬಂಧ ತೆರವಾದ ಹಿನ್ನೆಲೆಯಲ್ಲಿ ಗೋವಾಗೆ ಭೇಟಿ ನೀಡಿದ ಮುತಾಲಿಕ್ ಅವರು, ಅಲ್ಲಿನ ಆರೆಸ್ಸೆಸ್ ಘಟಕದ ಮಾಜಿ ಮುಖ್ಯಸ್ಥ ಸುಭಾಷ್ ವೆಲ್ಲಿಂಗ್‌ಕರ್ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಮಾತನಾಡಿದ ಸುಭಾಷ್ ವೆಲ್ಲಿಂಗ್‌ಕರ್, ಅಲ್ಪಸಂಖ್ಯಾತರ ಓಲೈಕೆಗಾಗಿ ಮಾಜಿ ಸಿಎಂ ಪರಿಕ್ಕರ್ ಅವರು ಮುತಾಲಿಕ್‌ರನ್ನು ನಿರ್ಬಂಧಿಸಿದ್ದರು. 10 ವರ್ಷಗಳ ಬಳಿಕ ಈಗ ನಿರ್ಬಂಧ ತೆರವುಗೊಳಿಸಿರುವ ಪ್ರಮೋದ್ ಸಾವಂತ್ ಅವರ ನಿರ್ಧಾರ ಶ್ಲಾಘನೀಯ ಎಂದಿದ್ದಾರೆ.
ನಿಷೇಧ ವಿಧಿಸಿದ್ದೇಕೆ?
ಗೋವಾ ರಾಜ್ಯಕ್ಕೆ ಪ್ರವೇಶ ಪಡೆಯಲು ಶ್ರೀ ರಾಮ ಸೇನೆ ಉದ್ದೇಶಿಸಿದ್ದು, ಅಲ್ಲಿ ಸೇನೆಯನ್ನು ಬಲಪಡಿಸಲಾಗುವುದು ಎಂದು 2012ರಲ್ಲಿ ಪ್ರಮೋದ್ ಮುತಾಲಿಕ್ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಮತ್ತು ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳು ಪ್ರಮೋದ್ ಮುತಾಲಿಕ್ ಗೋವಾ ಪ್ರವೇಶಕ್ಕೆ 60 ದಿನಗಳ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದರು. ನಂತರದಲ್ಲಿ ಇದನ್ನು ವಿಸ್ತರಿಸುತ್ತಾ ಸಾಗಿ, ಕೊನೆಗೆ 10 ವರ್ಷಗಳ ಕಾಲ ಈ ನಿಷೇಧ ವಿಸ್ತರಣೆಗೊಂಡಿತು. ರಾಜ್ಯದ ಶಾಂತಿ, ಸಾಮರಸ್ಯ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಪರಿಕ್ಕರ್ ಸರ್ಕಾರ ಹೇಳಿತ್ತು.
ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ:
ತಮಗೆ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಹಾಗೂ ಗೋವಾ ಪ್ರವೇಶಕ್ಕೆ ಅವಕಾಶ ಕೋರಿ ಮುತಾಲಿಕ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಧಾರ್ಮಿಕ ಕಾರಣಗಳಿಗಾಗಿ ನನಗೆ ಗೋವಾಗೆ ತೆರಳಲು ಅವಕಾಶ ನೀಡಬೇಕು ಎಂದು ಅವರು ಕೋರಿದ್ದರು. ಅಲ್ಲದೇ ತಮಗೆ ನಿರ್ಬಂಧ ಹೇರುವ ಮೂಲಕ ತಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದೂ ಆರೋಪಿಸಿದ್ದರು. ಆದರೆ, ‘ನೀವು ಮತ್ತು ನಿಮ್ಮ ಸಹಚರರು ನೈತಿಕ ಪೊಲೀಸ್‌ಗಿರಿಯ ಆರೋಪಗಳನ್ನು ಎದುರಿಸುತ್ತಿರುವ ಕಾರಣ, ಶಾಂತಿ ಕಾಪಾಡುವ ದೃಷ್ಟಿಯಿಂದ ಸರ್ಕಾರ ಇಂಥ ಕ್ರಮ ಕೈಗೊಂಡಿರಬಹುದು’ ಎಂದು ಹೇಳಿದ್ದ ಸುಪ್ರೀಂ ಕೋರ್ಟ್ ಮುತಾಲಿಕ್ ಅರ್ಜಿಯನ್ನು ವಜಾ ಮಾಡಿತ್ತು.