ನವದೆಹಲಿ/ಢಾಕಾ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಘರ್ಷದ ಪರಿಣಾಮವಾಗಿ ಐಪಿಎಲ್ 2026ರ ಆವೃತ್ತಿಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿರುವ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್, ಇದೀಗ ತಮ್ಮ ಮುಂದಿನ ಕ್ರೀಡಾ ತಾಣವನ್ನು ಕಂಡುಕೊಂಡಿದ್ದಾರೆ. ಬಿಸಿಸಿಐ ಸೂಚನೆಯ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಹಠಾತ್ ಬಿಡುಗಡೆಗೊಂಡಿರುವ ಮುಸ್ತಾಫಿಜುರ್, ಮುಂಬರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) 11ನೇ ಆವೃತ್ತಿಯಲ್ಲಿ ಆಡಲು ಸಜ್ಜಾಗಿದ್ದಾರೆ.
ಕೆಲವೇ ದಿನಗಳ ಹಿಂದಷ್ಟೇ ನಡೆದ ಮಿನಿ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸಿ ಬರೋಬ್ಬರಿ 9.20 ಕೋಟಿ ರೂ. ನೀಡಿ ಮುಸ್ತಾಫಿಜುರ್ ಅವರನ್ನು ಖರೀದಿಸಿತ್ತು. ಆದರೆ ಎರಡು ದೇಶಗಳ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಸಿಸಿಐ ಕಠಿಣ ನಿಲುವು ತಳೆದಿದ್ದರಿಂದ ಕೆಕೆಆರ್ ಅನಿವಾರ್ಯವಾಗಿ ಬಾಂಗ್ಲಾ ವೇಗಿಯನ್ನು ಕೈಬಿಡಬೇಕಾಯಿತು. ಈ ಬೆಳವಣಿಗೆಯ ಬೆನ್ನಲ್ಲೇ, ಪಿಎಸ್‌ಎಲ್ ಆಡಳಿತ ಮಂಡಳಿಯು ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮುಸ್ತಾಫಿಜುರ್ ಆಗಮನವನ್ನು ದೃಢಪಡಿಸಿದೆ. ಆದರೆ, ಅವರು ಪಿಎಸ್‌ಎಲ್‌ನಲ್ಲಿ ಯಾವ ಫ್ರಾಂಚೈಸಿ ಪರವಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಕೆಕೆಆರ್ ಸ್ಪಷ್ಟನೆ ಮತ್ತು ಬದಲಿ ಆಟಗಾರನ ಆಯ್ಕೆ
ಈ ಹಠಾತ್ ಬೆಳವಣಿಗೆಯ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕೋಲ್ಕತ್ತಾ ನೈಟ್ ರೈಡರ್ಸ್, ಐಪಿಎಲ್‌ನ ನಿಯಂತ್ರಕ ಮಂಡಳಿಯಾದ ಬಿಸಿಸಿಐನ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. “ಬಿಸಿಸಿಐನ ನಿರ್ದೇಶನ ಮತ್ತು ಸೂಕ್ತ ಸಮಾಲೋಚನೆಗಳ ನಂತರ ಮುಂಬರುವ ಐಪಿಎಲ್ ಋತುವಿನಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಐಪಿಎಲ್ ನಿಯಮಾವಳಿಗಳಿಗೆ ಅನುಗುಣವಾಗಿ ಕೆಕೆಆರ್‌ಗೆ ಬದಲಿ ಆಟಗಾರನನ್ನು ಆಯ್ಕೆ ಮಾಡಲು ಬಿಸಿಸಿಐ ಅನುಮತಿ ನೀಡಲಿದ್ದು, ಮುಂದಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು,” ಎಂದು ಫ್ರಾಂಚೈಸಿ ತಿಳಿಸಿದೆ.
ನಯಾಪೈಸೆ ಪರಿಹಾರವೂ ಸಿಗುವುದಿಲ್ಲ!
9.20 ಕೋಟಿ ರೂ. ಮೊತ್ತದ ಒಪ್ಪಂದ ರದ್ದಾಗಿದ್ದರೂ, ಮುಸ್ತಾಫಿಝುರ್‌ಗೆ ಕೆಕೆಆರ್ ಕಡೆಯಿಂದ ಯಾವುದೇ ಆರ್ಥಿಕ ಪರಿಹಾರ ಸಿಗುವ ಸಾಧ್ಯತೆಗಳಿಲ್ಲ ಎಂದು ತಿಳಿದುಬಂದಿದೆ. ಪಿಟಿಐ ವರದಿಯ ಪ್ರಕಾರ, ಐಪಿಎಲ್ ಆಟಗಾರರ ವೇತನ ವಿಮೆಯು ಆಟಗಾರರು ಗಾಯಗೊಂಡಾಗ ಮಾತ್ರ ಅನ್ವಯವಾಗುತ್ತದೆ. ಆದರೆ ಮುಸ್ತಾಫಿಜುರ್ ಪ್ರಕರಣವು ರಾಜಕೀಯ ಮತ್ತು ಆಡಳಿತಾತ್ಮಕ ಕಾರಣಗಳಿಂದ ಕೂಡಿದ್ದು, ಇದು ವಿಮಾ ವ್ಯಾಪ್ತಿಗೆ ಬರುವುದಿಲ್ಲ.
ಹೀಗಾಗಿ, ಕೆಕೆಆರ್ ಫ್ರಾಂಚೈಸಿ ಮುಸ್ತಾಫಿಝುರ್‌ಗೆ ಒಂದು ಪೈಸೆಯನ್ನೂ ಪಾವತಿಸಲು ಬದ್ಧವಾಗಿಲ್ಲ. ಪರಿಹಾರಕ್ಕಾಗಿ ಬಾಂಗ್ಲಾ ವೇಗಿ ಭಾರತೀಯ ಕಾನೂನಿನ ಅಡಿಯಲ್ಲಿ ನ್ಯಾಯಾಲಯದ ಮೊರೆ ಹೋಗುವ ಆಯ್ಕೆ ಇದೆಯಾದರೂ, ಐಪಿಎಲ್ ಭಾರತೀಯ ನ್ಯಾಯವ್ಯಾಪ್ತಿಗೆ ಒಳಪಡುವುದರಿಂದ ಮತ್ತು ಪ್ರಕ್ರಿಯೆ ಸಂಕೀರ್ಣವಾಗಿರುವುದರಿಂದ ವಿದೇಶಿ ಆಟಗಾರರು ಸಾಮಾನ್ಯವಾಗಿ ಕಾನೂನು ಹೋರಾಟಕ್ಕೆ ಇಳಿಯುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಕೆಕೆಆರ್ ತಂಡದ ಜೆರ್ಸಿ ತೊಡುವ ಮೊದಲೇ ಮುಸ್ತಾಫಿಜುರ್ ಬರಿಗೈಯಲ್ಲಿ ಪಕ್ಕದ ಪಾಕಿಸ್ತಾನ ಲೀಗ್‌ಗೆ ವಲಸೆ ಹೋಗುವಂತಾಗಿದೆ.
ಇದನ್ನೂ ಓದಿ; 9.20 ಕೋಟಿ ಆಸೆಗೆ ತಣ್ಣೀರು | ಕೆಕೆಆರ್‌ನಿಂದ ಹೊರಬಿದ್ದ ಮುಸ್ತಾಫಿಝುರ್‌ಗೆ ಬಿಡಿಗಾಸೂ ಪರಿಹಾರ ಇಲ್ಲ?


















