ಮುಂಬೈ: ಕೊನೆಗೂ ಮುಂಬೈ ತಂಡ ಜಯದ ಲಯಕ್ಕೆ ಮರಳಿದೆ. ಚೊಚ್ಚಲ ಪಂದ್ಯವಾಡಿದ ಅಶ್ವನಿ ಕುಮಾರ್ (Ashwani Kumar) ಮಾರಕ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಅಶ್ವಿನಿಕುಮಾರ್ ಮಾರಕ ಬೌಲಿಂಗ್ ನಿಂದಾಗಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ 16.2 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನಟ್ಟಿದ ಮುಂಬೈ 12.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ 18ನೇ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದ ಮುಂಬೈ ತಂಡ 6ನೇ ಸ್ಥಾನಕ್ಕೆ ಏರಿಕೆ ಕಂಡರೆ, ಕೋಲ್ಕತ್ತಾ 10ನೇ ಸ್ಥಾನಕ್ಕೆ ಕುಸಿಯಿತು.
ಸುಲಭ ಸವಾಲನ್ನು ಬೆನ್ನಟ್ಟಿದ ಮುಂಬೈ 13 ರನ್ ಗಳಿಸಿದ ರೋಹಿತ್ ವಿಕೆಟ್ ಆರಂಭದಲ್ಲೇ ಕಳೆದುಕೊಂಡರೂ ರಯಾನ್ ರಿಕಲ್ಟನ್ ಔಟಾಗದೇ 62 ರನ್(41 ಎಸೆತ, 4 ಬೌಂಡರಿ, 5 ಸಿಕ್ಸ್), ವಿಲ್ ಜಾಕ್ಸ್ 16 ರನ್, ಕೊನೆಯಲ್ಲಿ ಅಭಿಮಾನಿಗಳನ್ನು ರಂಜಿಸಿದ ಸೂರ್ಯಕುಮಾರ್ ಯಾದವ್ 27 ರನ್(9 ಎಸೆತ, 3 ಬೌಂಡರಿ, 2 ಸಿಕ್ಸ್) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
ಕೋಲ್ಕತ್ತಾ ಆರಂಭದಿಂದಲೂ ವಿಕೆಟ್ ಕಳೆದುಕೊಂಡಿತು. ಪರಿಣಾಮ ರನ್ ಗಳಿಸುವಲ್ಲಿ ಪರದಾಡಿತು. 74 ರನ್‌ಗಳಿಸುವಷ್ಟರಲ್ಲೇ 6 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಇಂಪ್ಯಾಕ್ಟ್ ಪ್ಲೇಯರ್ ರಘುವಂಶಿ 26 ರನ್, ರಮನ್‌ದೀಪ್ ಸಿಂಗ್ 22 ರನ್ ಹೊಡೆದು ಔಟಾದರು. ಮುಂಬೈ ಪರ ಐಪಿಎಲ್ ಪಾದಾರ್ಪಣೆ ಮಾಡಿದ ಅಶ್ವನಿ ಕುಮಾರ್ 4 ವಿಕೆಟ್ ಪಡೆದರು. ದೀಪಕ್ ಚಹರ್ 2, ಬೌಲ್ಟ್, ಪಾಂಡ್ಯ, ವಿಘ್ನೇಶ್ ಪುತೂರ್, ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.