ಮುಂಬೈ: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ತಮ್ಮ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ಸೆಲೆಬ್ರಿಟಿ ದಂಪತಿ, ಉದ್ಯಮಿಯೊಬ್ಬರಿಗೆ ಸುಮಾರು 60 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರ್ಥಿಕ ಅಪರಾಧಗಳ ವಿಭಾಗದ ಮೂಲಗಳು ಸೂಚಿಸುವಂತೆ ಪೊಲೀಸರು ಈಗ ಶೆಟ್ಟಿ ಮತ್ತು ಕುಂದ್ರಾ ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಂಪನಿಯ ಲೆಕ್ಕಪರಿಶೋಧಕರನ್ನು ಕೂಡ ವಿಚಾರಣೆಗೆ ಸಂಬಂಧಿಸಿದಂತೆ ನೋಟೀಸ್ ನೀಡಲಾಗಿದೆ.
2015 ರಿಂದ 2023 ರ ನಡುವೆ, ದಂಪತಿ ತಮ್ಮ ವ್ಯವಹಾರವನ್ನು ವಿಸ್ತರಿಸುವ ನೆಪದಲ್ಲಿ ನನ್ನಿಂದ 60 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಉದ್ಯಮಿ ದೀಪಕ್ ಕೊಠಾರಿ ಆರೋಪಿಸಿದ್ದರು.
12% ವಾರ್ಷಿಕ ಬಡ್ಡಿಯೊಂದಿಗೆ ನಿರ್ದಿಷ್ಟ ಸಮಯದೊಳಗೆ ಹಣ ಹಿಂತಿರುಗಿಸುವುದಾಗಿ ಶಿಲ್ಪಾ ಶೆಟ್ಟಿ ಭರವಸೆ ನೀಡಿದ್ದರು. 2016ರಲ್ಲಿ ಲಿಖಿತವಾಗಿ ವೈಯಕ್ತಿಕ ಖಾತರಿ ಕೂಡ ನೀಡಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ ಶಿಲ್ಪಾ ಶೆಟ್ಟಿ ಅವರು ಸಂಸ್ಥೆ ನಿರ್ದೇಶಕಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಉದ್ಯಮಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.