ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ಹಲವರು ಮುಡಾ ಅಕ್ರಮ ನಿವೇಶನ ಹಂಚಿಕೆ ಕೇಸ್ ನಲ್ಲಿ (Muda Case) ಸಿಲುಕಿದ್ದಾರೆ ಎನ್ನಲಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆದರೆ, ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸದಿರಲು ಸ್ನೇಹಮಯಿ ಕೃಷ್ಣ ಅವರು ತೀರ್ಮಾನಿಸಿದ್ದಾರೆ.
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟಿಗೆ ಮನವಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಹೈಕೋರ್ಟ್ ನಿರಾಕರಿಸಿತ್ತು. ಲೋಕಾಯುಕ್ತ ತನಿಖೆಯೇ ಮುಂದುವರಿಯಲಿ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸ್ನೇಹಮಯಿ ಕೃಷ್ಣ ಅವರು ಹೇಳಿದ್ದರು. ಆದರೆ, ಈಗ ಕಾನೂನು ಹೋರಾಟದಿಂದ ಹಿಂದೆ ಸರಿಯಲು ತೀರ್ಮಾನಿಸಿರುವುದು ಅಚ್ಚರಿ ಮೂಡಿಸಿದೆ.
ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮತ್ತಷ್ಟು ಕಾಲ ವಿಳಂಬ ಮಾಡುವ ಬದಲು, ಲೋಕಾಯುಕ್ತ ಅಧಿಕಾರಿಗಳು ಏನೇ ವರದಿ ಸಲ್ಲಿಸಿದರೂ, ನನ್ನ ಬಳಿ ಇರುವ ಮತ್ತು ಲಭ್ಯವಾಗುವ ಸಾಕ್ಷ್ಯಾಧಾರಗಳನ್ನು ಆಧರಿಸಿ, ಮಾನ್ಯ ನ್ಯಾಯಾಲಯದಲ್ಲಿ ನಾನು ಮಾಡಿರುವ ಆರೋಪವನ್ನು ಸಾಬೀತುಪಡಿಸುತ್ತೇನೆ. ಇದರೊಂದಿಗೆ ಆರೋಪಿಗಳಿಗೆ ಶಿಕ್ಷೆ ಕೊಡಿಸಬಹುದು ಎಂಬ ವಿಶ್ವಾಸ ಮೂಡಿದ್ದರಿಂದ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸದಿರಲು ತೀರ್ಮಾನಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತಷ್ಟು ನಿರಾಳರಾಗಿದ್ದಾರೆ. ಇದಕ್ಕೂ ಮೊದಲು, ಸಿಬಿಐ ತನಿಖೆಗೆ ವಹಿಸಲು ಅರ್ಜಿ ಸಲ್ಲಿಸಿದ್ದರಿಂದ ಸಿದ್ದರಾಮಯ್ಯ ಅವರಿಗೆ ಬಂಧನದ ಭೀತಿ ಎದುರಾಗಿತ್ತು. ಸಿಬಿಐ ತನಿಖೆಗೆ ವಹಿಸಿದರೆ ಹೇಗೆ ಎಂಬ ಆತಂಕ ಎದುರಾಗಿತ್ತು.