ಬೆಂಗಳೂರು: ಎದುರು ಮನೆ ಮುಂದೆ ಇಟ್ಟಿದ್ದ ಬಕೆಟ್ ನಲ್ಲಿನ ನೀರು ಮುಟ್ಟಿದ್ದಕ್ಕೆ ಮಗು ಹಾಗೂ ಮಹಿಳೆಯ ಮೇಲೆ ದುರುಳರು ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗು ಆಟವಾಡುತ್ತಾ ಬಕೆಟ್ನಲ್ಲಿನ ನೀರು ಮುಟ್ಟಿದ್ದಕ್ಕೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕ್ರಿಕೆಟ್ ಬ್ಯಾಟ್, ವಿಕೆಟ್ ಬಳಸಿ ಮಗುವಿನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರು ಯುವಕರು ಸೇರಿಕೊಂಡು ಮಹಿಳೆಯೂ ಅನ್ನದೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಘಟನೆಯಲ್ಲಿ ರಾಜೇಶ್ವರಿ ಎಂಬ ಮಹಿಳೆಯ ಮನೆ ಮುಂದೆ ಇಟ್ಟಿದ್ದ ಬಕೆಟ್ ನ್ನು ಬಾಲಕ ಮುಟ್ಟಿದ್ದ ಎನ್ನಲಾಗಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಲಭ್ಯವಾಗಿದ್ದು, ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



















