ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಅವರು ಹಿರಿಯ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಜಡೇಜಾ, ಸರಣಿ ನಿರ್ಧರಿಸುವ ಪಂದ್ಯದಲ್ಲಿ ಪುಟಿದೆಳುವ ವಿಶ್ವಾಸವನ್ನು ಸಿರಾಜ್ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಿಂದ ವಿಶ್ರಾಂತಿ ಪಡೆದ ನಂತರ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ತಂಡಕ್ಕೆ ಮರಳಿದ್ದ ಜಡೇಜಾ, ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕಿವೀಸ್ ವಿರುದ್ಧದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜಡೇಜಾ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ (0/44 ಮತ್ತು 0/56). ಅಲ್ಲದೆ ಬ್ಯಾಟಿಂಗ್‌ನಲ್ಲೂ ಕೇವಲ 4 ಮತ್ತು 27 ರನ್‌ಗಳನ್ನಷ್ಟೇ ಕಲೆಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್ ತಯಾರಿಗೂ ಮುನ್ನ ಜಡೇಜಾ ಅವರ ಫಾರ್ಮ್ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
‘ಒಂದೇ ಒಂದು ವಿಕೆಟ್ ಸಾಕು’
ಇಂದೋರ್‌ನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿರಾಜ್, ಸಹ ಆಟಗಾರನ ಸಾಮರ್ಥ್ಯದ ಬಗ್ಗೆ ಅಚಲ ನಂಬಿಕೆ ವ್ಯಕ್ತಪಡಿಸಿದರು. “ಜಡೇಜಾ ಅವರ ಫಾರ್ಮ್ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅವರು ಲಯಕ್ಕೆ ಮರಳಲು ಕೇವಲ ಒಂದು ವಿಕೆಟ್ ಅಂತರದಲ್ಲಿದ್ದಾರೆ ಅಷ್ಟೇ. ಒಮ್ಮೆ ಅವರಿಗೆ ಆ ಬ್ರೇಕ್-ಥ್ರೂ (ವಿಕೆಟ್) ಸಿಕ್ಕರೆ, ನಂತರ ನೀವು ಸಂಪೂರ್ಣ ವಿಭಿನ್ನ ಬೌಲರ್ ಅನ್ನು ನೋಡಲಿದ್ದೀರಿ,” ಎಂದು ಸಿರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಯಾಚ್ ಡ್ರಾಪ್ ಪರಿಣಾಮ ಬೀರಿದೆ
ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ಸೋಲಿನ ಬಗ್ಗೆಯೂ ಸಿರಾಜ್ ಮಾತನಾಡಿದರು. ಕೆ.ಎಲ್ ರಾಹುಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರ ಹೋರಾಟವನ್ನು ಶ್ಲಾಘಿಸಿದ ಅವರು, ಫೀಲ್ಡಿಂಗ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಒಪ್ಪಿಕೊಂಡರು.
“ವಿಶ್ವದರ್ಜೆಯ ಬ್ಯಾಟರ್‌ಗಳು ನಮಗೆ ಹೆಚ್ಚು ಅವಕಾಶಗಳನ್ನು ನೀಡುವುದಿಲ್ಲ. ಸಿಕ್ಕ ಅವಕಾಶದಲ್ಲಿ ನಾವು ಎಡವಿದರೆ, ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಡ್ಯಾರಿಲ್ ಮಿಚೆಲ್ ಅವರ ಕ್ಯಾಚ್ ಕೈಚೆಲ್ಲಿದ್ದು ಪಂದ್ಯದ ಗತಿಯನ್ನೇ ಬದಲಿಸಿತು. ಆ ಕ್ಯಾಚ್ ಹಿಡಿದಿದ್ದರೆ ಫಲಿತಾಂಶ ಬೇರೆಯದೇ ಆಗಿರುತ್ತಿತ್ತು,” ಎಂದು ಸಿರಾಜ್ ಬೇಸರ ವ್ಯಕ್ತಪಡಿಸಿದರು. ರಾಜ್‌ಕೋಟ್‌ನಲ್ಲಿ ಜೀವದಾನ ಪಡೆದ ಮಿಚೆಲ್ ಅಜೇಯ 131 ರನ್ ಸಿಡಿಸಿ ಕಿವೀಸ್ ಗೆಲುವಿಗೆ ಕಾರಣರಾಗಿದ್ದರು.
ಅರ್ಶ್‌ದೀಪ್‌ಗೆ ಸಿರಾಜ್ ಬೆಂಬಲ
ಇಂದೋರ್ ಪಂದ್ಯದ ಬೌಲಿಂಗ್ ಸಂಯೋಜನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿರಾಜ್, ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಪರ ಬ್ಯಾಟ್ ಬೀಸಿದರು. “ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಅರ್ಶ್‌ದೀಪ್‌ಗಿದೆ. ಅಂತಿಮವಾಗಿ ತಂಡದ ಸಂಯೋಜನೆಯನ್ನು ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ನಿರ್ಧರಿಸುತ್ತಾರೆ. ಆದರೆ ಒಬ್ಬ ಬೌಲರ್ ಆಗಿ ನನಗೆ ಅರ್ಶ್‌ದೀಪ್ ಮೇಲೆ ಸಂಪೂರ್ಣ ನಂಬಿಕೆಯಿದೆ,” ಎಂದು ಸಿರಾಜ್ ಹೇಳಿದರು.
ಇದನ್ನೂ ಓದಿ: ಟಿ20 ವಿಶ್ವಕಪ್‌ನಿಂದ ಹೊರಬಿದ್ದರೂ ಎದೆಗುಂದದ ಸಿರಾಜ್ | ಹೈದರಾಬಾದ್ ವೇಗಿ ನೀಡಿದ ಸ್ಪಷ್ಟನೆ ಹೀಗಿದೆ..


















