ನವದೆಹಲಿ: ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೆಹಲಿಯ ಕೆಂಪುಕೋಟೆಯ ಮೇಲಿಂದ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿಯವರು ಮಾಡಿದ ಭಾಷಣವು ಮತ್ತೊಂದು ಹೊಸ ದಾಖಲೆಯನ್ನು ಬರೆದಿದೆ. ಮೋದಿಯವರ ಸತತ 12ನೇ ಸ್ವಾತಂತ್ರ್ಯೋತ್ಸವ ಭಾಷಣ ಇದಾಗಿದ್ದು, ಬರೋಬ್ಬರಿ 105 ನಿಮಿಷಗಳ ಕಾಲ ಅವರು ಮಾತನಾಡಿದ್ದಾರೆ. ಈ ಮೂಲಕ, ಇಂದು ಅವರು ಅವರದ್ದೇ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಅತಿ ದೀರ್ಘ ಭಾಷಣ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
79ನೇ ಸ್ವಾತಂತ್ರ್ಯ ದಿನಾಚರಣೆಯ ಈ ಭಾಷಣದಲ್ಲಿ, ಮೋದಿ ತಮ್ಮ 2024ರ 98 ನಿಮಿಷಗಳ ಭಾಷಣದ ದಾಖಲೆಯನ್ನು ಮುರಿದಿದ್ದಾರೆ. ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿಗಿಂತಲೂ ಸುದೀರ್ಘವಾಗಿ ಸ್ವಾತಂತ್ರ್ಯೋತ್ಸವದಂದು ಮಾತನಾಡುವ ಹೆಗ್ಗಳಿಕೆ ಮೋದಿ ಅವರದ್ದಾಗಿದ್ದು, ಅವರ ಭಾಷಣಗಳ ಸರಾಸರಿ ಅವಧಿ 82 ನಿಮಿಷಗಳಾಗಿವೆ.
ಮೋದಿ ಭಾಷಣದ ಅವಧಿ:
ಪ್ರಧಾನಿ ಮೋದಿ ಅವರ ಇದುವರೆಗಿನ ಸ್ವಾತಂತ್ರ್ಯೋತ್ಸವ ಭಾಷಣಗಳ ಅವಧಿಗಳು ಹೀಗಿವೆ:
2014: 65 ನಿಮಿಷಗಳು
2015: 88 ನಿಮಿಷಗಳು
2016: 96 ನಿಮಿಷಗಳು (ಮೂರನೇ ಅತಿ ದೀರ್ಘ)
2017: 56 ನಿಮಿಷಗಳು (ಅತ್ಯಂತ ಚಿಕ್ಕ ಭಾಷಣ)
2018: 83 ನಿಮಿಷಗಳು
2019: 92 ನಿಮಿಷಗಳು
2020: 90 ನಿಮಿಷಗಳು
2021: 88 ನಿಮಿಷಗಳು
2022: 74 ನಿಮಿಷಗಳು
2024: 98 ನಿಮಿಷಗಳು
ತಮ್ಮ 105 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಸರ್ಕಾರದ ಸಾಧನೆಗಳು, ‘ನವ ಭಾರತ’ ಮತ್ತು ‘ವಿಕಸಿತ ಭಾರತ 2047’ರ ದೃಷ್ಟಿಕೋನದ ಮುಂದಿನ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ. ಇದೇ ವೇಳೆ, ‘ಮೇಡ್ ಇನ್ ಇಂಡಿಯಾ’ ಕನಸನ್ನು ಹಂಚಿಕೊಂಡ ಅವರು, ಭಾರತೀಯ ಯುದ್ಧ ವಿಮಾನಗಳು ಮತ್ತು ಸೆಮಿಕಂಡಕ್ಟರ್ ಚಿಪ್ ಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವಂತೆ ಯುವಕರು ಮತ್ತು ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ. ಆಪರೇಷನ್ ಸಿಂದೂರದ ಯಶಸ್ಸಿನ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ.