ಟಿಯಾಂಜಿನ್: ಏಳು ವರ್ಷಗಳ ಬಳಿಕ, ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ಚೀನಾಕ್ಕೆ ಬಂದಿಳಿದಿದ್ದು, ಟಿಯಾಂಜಿನ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. 2018ರ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಚೀನಾ ಪ್ರವಾಸ ಕೈಗೊಂಡಿದ್ದಾರೆ.
ವಾಷಿಂಗ್ಟನ್ ನ ಸುಂಕ ನೀತಿಗಳಿಂದ ಉಂಟಾದ ಭಾರತ-ಅಮೆರಿಕ ಸಂಬಂಧಗಳಲ್ಲಿನ ಹಠಾತ್ ಕುಸಿತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಎರಡು ದಿನಗಳ ಜಪಾನ್ ಭೇಟಿ ಮುಗಿಸಿದ ಪ್ರಧಾನಿ ಮೋದಿ, ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ(ಎಸ್ ಸಿ ಒ)ದ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಚೀನಾಗೆ ಪ್ರವಾಸ ಕೈಗೊಂಡಿದ್ದಾರೆ.
ಆದಾಗ್ಯೂ, ಅಮೆರಿಕದ ಸುಂಕ ಸಂಘರ್ಷ ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ಪ್ರಮುಖ ಆರ್ಥಿಕತೆಗಳ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ನಾಳೆ(ಭಾನುವಾರ) ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿಯ ನಡೆಸಲಿರುವ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಮಾತುಕತೆಯಲ್ಲಿ, ಮೋದಿ ಮತ್ತು ಕ್ಸಿ ಭಾರತ-ಚೀನಾ ಆರ್ಥಿಕ ಸಂಬಂಧಗಳನ್ನು ಪರಿಶೀಲಿಸುವ ನಿರೀಕ್ಷೆಯಿದೆ. ಮಾತ್ರವಲ್ಲದೆ ಪೂರ್ವ ಲಡಾಖ್ ಗಡಿ ವಿವಾದದ ನಂತರ ತೀವ್ರ ಒತ್ತಡಕ್ಕೆ ಸಿಲುಕಿರುವ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಸಾಮಾನ್ಯಗೊಳಿಸುವ ಕ್ರಮಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.



















