ನವದೆಹಲಿ: ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ಅಕ್ಟೋಬರ್ 26ರಿಂದ 28ರವರೆಗೆ ಆಸಿಯಾನ್ ಶೃಂಗಸಭೆ ನಡೆಯಲಿದೆ. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗುತ್ತಾರೆ. ಭೇಟಿ ವೇಳೆ ಭಾರತ- ಅಮೆರಿಕ ವ್ಯಾಪಾರ ಒಪ್ಪಂದ, ಹೆಚ್ಚುವರಿ ಸುಂಕದ ಬಗ್ಗೆ ಮಾತನಾಡುವ ನಿರೀಕ್ಷೆ ಇತ್ತು. ಆದರೆ, ನರೇಂದ್ರ ಮೋದಿ ಅವರು ಕೌಲಾಲಂಪುರಕ್ಕೆ ತೆರಳದಿರಲು ನಿರ್ಧರಿಸಿದ ಕಾರಣ ಉಭಯ ನಾಯಕರ ಭೇಟಿಯೂ ಮೊಟಕಾದಂತೆ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಬದಲಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೂ, ನರೇಂದ್ರ ಮೋದಿ ಅವರು ವರ್ಚ್ಯುವಲ್ ಆಗಿ ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಮೋದಿ-ಟ್ರಂಪ್ ಭೇಟಿಯು ರದ್ದಾದಂತೆ ಆಗಿದೆ. ಜೈಶಂಕರ್ ಅವರು ಡೊನಾಲ್ಡ್ ಟ್ರಂಪ್ ಅವರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನರೇಂದ್ರ ಮೋದಿ ಅವರು ಇದಕ್ಕೂ ಮೊದಲು ಆಸಿಯಾನ್ ಶೃಂಗಸಭೆಗಾಗಿ ಕೌಲಾಲಂಪುರಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಕೊನೆಯ ಕ್ಷಣದಲ್ಲಿ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ನರೇಂದ್ರ ಮೋದಿ ಅವರು 2023 ಹಾಗೂ 2024ರ ಆಸಿಯಾನ್ ಶೃಂಗಸಭೆಗಳಲ್ಲಿ ಪಾಲ್ಗೊಂಡಿದ್ದರು.
ಅಮೆರಿಕವು ಭಾರತದ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಿದೆ. ಹಾಗೆಯೇ, ಎಚ್1-ಬಿ ವೀಸಾ ಶುಲ್ಕವನ್ನೂ ಒಂದು ಲಕ್ಷ ಡಾಲರ್ ಗೆ (88 ಲಕ್ಷ ರೂ.) ಏರಿಸಿರುವುದು ಕೂಡ ಭಾರತಕ್ಕೆ ತೊಂದರೆಯಾಗಿದೆ. ಅಲ್ಲದೆ, ರಷ್ಯಾದಿಂದ ತೈಲ ಖರೀದಿಸಿದರೆ ಇನ್ನಷ್ಟು ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗೆ ಕಿವಿಗೊಡದೆ ಭಾರತವು ರಷ್ಯಾದಿಂದ ತೈಲ ಖರೀದಿಸಿ ಮುಂದುವರಿಸಿದೆ.



















