ಜೆರುಸಲೇಮ್/ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 9 ವರ್ಷಗಳ ದೀರ್ಘ ಬಿಡುವಿನ ನಂತರ ಇಂದು ಇಸ್ರೇಲ್‌ಗೆ ಭೇಟಿ ನೀಡುತ್ತಿದ್ದು, ಇಡೀ ದೇಶವೇ ಅವರಿಗೆ ಅದ್ಧೂರಿ ಸ್ವಾಗತ ಕೋರುತ್ತಿದೆ. 2017ರ ನಂತರ ಮೊದಲ ಬಾರಿಗೆ ಇಸ್ರೇಲ್ ನೆಲಕ್ಕೆ ಕಾಲಿಡುತ್ತಿರುವ ಮೋದಿ ಅವರಿಗೆ ಅಲ್ಲಿನ ಪ್ರತಿಷ್ಠಿತ ಪತ್ರಿಕೆ ‘ದಿ ಜೆರುಸಲೇಮ್ ಪೋಸ್ಟ್’ ಅತ್ಯಂತ ವಿಶಿಷ್ಟ ಗೌರವ ನೀಡಿದೆ. ಪತ್ರಿಕೆಯ ಮುಖಪುಟವನ್ನೇ ಪ್ರಧಾನಿ ಮೋದಿ ಅವರ ಸ್ವಾಗತಕ್ಕಾಗಿ ಮೀಸಲಿಟ್ಟಿದ್ದು, ಇದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
‘ದಿ ಜೆರುಸಲೇಮ್ ಪೋಸ್ಟ್’ ಪತ್ರಿಕೆಯ ಸಂಪಾದಕ ಶ್ವಿಕಾ ಕ್ಲೈನ್ ಅವರು ಪ್ರಧಾನಿ ಮೋದಿ ಅವರ ಭೇಟಿಯ ಮುನ್ನಾದಿನದಂದು ಈ ವಿಶೇಷ ಮುಖಪುಟವನ್ನು ಎಕ್ಸ್ (ಟ್ವಿಟರ್) ಮೂಲಕ ಹಂಚಿಕೊಂಡಿದ್ದಾರೆ. ಪತ್ರಿಕೆಯ ಮುಖಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ನಮಸ್ತೆ ಎಂದು ಮುದ್ರಿಸಲಾಗಿದೆ. ಪ್ರಧಾನಿಯವರ ಐತಿಹಾಸಿಕ ಭೇಟಿಯನ್ನು ಸಂಭ್ರಮಿಸಲು ಮತ್ತು ಅವರನ್ನು ಸ್ವಾಗತಿಸಲು ಪತ್ರಿಕೆ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಇಸ್ರೇಲ್‌ನ ಸಾರ್ವಜನಿಕ ವಲಯದಲ್ಲಿ ಭಾರತೀಯ ಪ್ರಧಾನಿಯ ಭೇಟಿಯ ಬಗ್ಗೆ ಎಷ್ಟು ಕುತೂಹಲ ಮತ್ತು ಗೌರವವಿದೆ ಎಂಬುದಕ್ಕೆ ಈ ವಿಶೇಷ ಮುಖಪುಟವೇ ಸಾಕ್ಷಿ.
ರಕ್ಷಣೆ, ತಂತ್ರಜ್ಞಾನದ ಕುರಿತು ಪ್ರಮುಖ ಚರ್ಚೆ
ಇಂದು ಸಂಜೆ ಇಸ್ರೇಲ್ ತಲುಪಲಿರುವ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ರಕ್ಷಣೆ, ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ಹಾಗೂ ಜಲ ನಿರ್ವಹಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯಲಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ಇದೇ ವೇಳೆ ಇಸ್ರೇಲ್ ಸಂಸತ್ ‘ನೆಸೆಟ್’ (Knesset) ಅನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದು, ಈ ಗೌರವ ಪಡೆಯಲಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಪ್ರಧಾನಿಯವರ ಭೇಟಿಗೆ ಮುನ್ನವೇ ಉಭಯ ದೇಶಗಳು ಭಯೋತ್ಪಾದನೆಯ ವಿರುದ್ಧದ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ. ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ‘ಶೂನ್ಯ ಸಹಿಷ್ಣು’ ನೀತಿಯನ್ನು ಎರಡೂ ರಾಷ್ಟ್ರಗಳು ಪ್ರತಿಪಾದಿಸಿವೆ. ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಹಣಕಾಸು ಅಕ್ರಮ ತಡೆ ಸಮಿತಿ (FATF) ಅಡಿಯಲ್ಲಿ ಸಹಕಾರವನ್ನು ಹೆಚ್ಚಿಸಲು ಬದ್ಧವಾಗಿರುವುದಾಗಿಯೂ ಭಾರತ ಮತ್ತು ಇಸ್ರೇಲ್ ಜಂಟಿ ಹೇಳಿಕೆ ನೀಡಿವೆ.
ಜಾಗತಿಕ ವಿದ್ಯಮಾನಗಳ ಮೇಲೆ ಕಣ್ಣು
ಪ್ರಸ್ತುತ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಗಾಜಾ ಪಟ್ಟಿಯಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ಜಾಗತಿಕವಾಗಿ ಮಹತ್ವ ಪಡೆದಿದೆ. ನೆತನ್ಯಾಹು ಮತ್ತು ಮೋದಿ ಅವರು ಪ್ರಾದೇಶಿಕ ಭದ್ರತೆಯ ಬಗ್ಗೆ ಆಳವಾದ ಚರ್ಚೆ ನಡೆಸುವ ನಿರೀಕ್ಷೆಯಿದೆ. ಮೋದಿ ಅವರನ್ನು ನೆತನ್ಯಾಹು ಅವರು ‘ವೈಯಕ್ತಿಕ ಸ್ನೇಹ’ದ ನೆಲೆಯಲ್ಲಿ ಬರಮಾಡಿಕೊಳ್ಳುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಹೊತ್ತಿ ಉರಿದ ಹಾರ್ಡ್‌ವೇರ್ ಶಾಪ್ | ತಪ್ಪಿದ ಭಾರೀ ಅನಾಹುತ



















