ತುಮಕೂರು: ಭಾರತ ವಿಕಸಿತ ಆಗಬೇಕು ಎಂಬುವುದನ್ನು ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆಯಡಿಯ ತೋರಿಸಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ತಿಪಟೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 19ನೇ ಕಂತಿನ 22 ಸಾವಿರ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದಾರೆ. 9 ಕೋಟಿ 80 ಲಕ್ಷ ಕುಟುಂಬಗಳಿಗೆ ವಿತರಣೆ ಮಾಡಿದ್ದಾರೆ. 3 ಲಕ್ಷದ 46 ಸಾವಿರ ಕೋಟಿ ರೂಪಾಯಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿದೆ.
10 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಜಾರಿಗೆ ತಂದಿದ್ದರು. ಇಂತಹ ಯೋಜನೆಗಳನ್ನು ಹಿಂದೆಯೇ ಜಾರಿಗೆ ತಂದಿದ್ದರೆ, ಭಾರತ ಇಷ್ಟೊತ್ತಿಗಾಗಲೇ ವಿಕಸಿತ ಭಾರತ ಆಗುತ್ತಿತ್ತು. ಮೋದಿ ಅವರ ದೂರ ದೃಷ್ಟಿ ನಮಗೆಲ್ಲಾ ಸ್ಪೂರ್ತಿ ಮತ್ತು ಸಂದೇಶ ಆಗಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿದ ಅವರು, ಇಂತಹ ಅಮಾನವೀಯ ಕೃತ್ಯ ಕೈಗೊಳ್ಳುತ್ತಿರುವ ಅನಾಮಿಕ ಸ್ಯಾಡಿಸ್ಟ್ ಜನರಿಗೆ ಸರ್ಕಾರ ತಕ್ಕ ಉತ್ತರ ನೀಡಬೇಕು. ನಾವೆಲ್ಲಾ ಭಾರತೀಯರು. ಪ್ರಧಾನಿ ಮೋದಿ ಅವರು ಕರ್ನಾಟಕ ಹಾಗೂ ಕೇವಲ ಮಹಾರಾಷ್ಟ್ರಕ್ಕೆ ಸೀಮಿತ ಆಗಿಲ್ಲ. ಆದರೆ, ಮಹಾರಾಷ್ಟ್ರ ಪುಂಡರು ಈ ರೀತಿ ವರ್ತನೆ ಮಾಡುತ್ತಿರುವುದು ಶೋಭೆಯಲ್ಲ. ಮಹಾರಾಷ್ಟ್ರ ಸರ್ಕಾರದ ಸಿಎಂಗೆ ಇಂತಹ ಘಟನೆಗಳ ವಿರುದ್ಧ ಕಡಿವಾಣ ಹಾಕಬೇಕೆಂದು ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
ಮೆಟ್ರೋ ರೈಲಿನ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರಿಗೆ ಮೆಟ್ರೋ ತಂದವರು ನಾವು. ಜೆ.ಎಚ್. ಪಟೇಲ್ ರು ಮುಖ್ಯಮಂತ್ರಿ ಆಗಿದ್ದ ವೇಳೆ ನಾನು ನಗರಾಭಿವೃದ್ಧಿ ಮಂತ್ರಿ ಆಗಿದ್ದೆ. ವೀರಪ್ಪ ಮೊಯ್ಲಿ ಅವರು ಮೆಟ್ರೋವನ್ನು ವೈಟ್ ಎಲಿಫೆಂಟ್ ಅಂತ ಬರೆದಿದ್ದರು. ಮೆಟ್ರೋ ಬಗ್ಗೆ ನಾಲ್ಕೈದು ಗಂಟೆಗಳ ಕಾಲ ಚರ್ಚೆ ಆಗಿತ್ತು. ಆದರೆ, ರಾಜ್ಯದ ಸಿಎಂ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಡಬೇಕು. ಪಕ್ಕದ ರಾಜ್ಯದಲ್ಲಿ ಮೆಟ್ರೋ ಇದೆ. ಅದರ ನಿರ್ವಹಣೆ ಯಾರು ಮಾಡುತ್ತಿದ್ದಾರೆ? ಎಂಬುವುದನ್ನು ಎಲ್ಲರೂ ತಿಳಿಯಬೇಕು. ಮೆಟ್ರೋ ಕರ್ತವ್ಯ ನಿರ್ವಹಣೆ ಮಾಡುವುದು ರಾಜ್ಯ ಸರ್ಕಾರ. ಆದರೆ, ದರ ಏರಿಕೆ ಮಾಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.