ಬೆಂಗಳೂರು : ಚುನಾವಣೆಯಲ್ಲಿ ಮತ ಕಳ್ಳತನವಾಗಿದೆ ಎನ್ನುವುದರ ವಿರುದ್ಧ ನಮ್ಮ ನಾಯಕ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ. ಸುಮ್ಮನೆ ರಾಜಕೀಯ ಮಾಡುತ್ತಿಲ್ಲ. ಸಂಪೂರ್ಣ ಅಧ್ಯಯನ ಮಾಡಿ, ಈ ಮತಕಳ್ಳತನವಾಗಿದೆ ಎಂದು ದೇಶದ ಜನರ ಎದುರಿಗೆ ತೆರೆದಿಟ್ಟಿದ್ದಾರೆ. ಸಂವಿಧಾನ ಬಂದ ಮೇಲೆ ಒಬ್ಬ ವ್ಯಕ್ತಿಗೆ ಒಂದೇ ಮತ. ಈ ಮತದಾನದ ಹಕ್ಕಿನ ಮೂಲಕ ಐದು ವರ್ಷಗಳಿಗೊಮ್ಮೆ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುತ್ತಾರೆ. ಚುನಾವಣೆಯಲ್ಲಿ ಗೆದ್ದವರು ಅಧಿಕಾರ ಹಿಡಿಯುತ್ತಾರೆ. ಮತದಾನದ ಹಕ್ಕನ್ನು ಸಂವಿಧಾನ ಕೊಟ್ಟಿರುವುದು. ಇದನ್ನು ಯಾರಿಂದಲೂ ನಾಶ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಫ್ರೀಡಂ ಪಾರ್ಕ್ ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಮನುವಾದಿಗಳಾಗಿರುವ ಬಿಜೆಪಿಯವರಿಗೆ ಸಂವಿಧಾನದ ಮೇಲೆ ಗೌರವವಿಲ್ಲ. ಸಂವಿಧಾನ ಹೇಳಿದಂತೆ ಅವರು ನಡೆಯುವುದಿಲ್ಲ. ಸಂವಿಧಾನವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮತದ ಹಕ್ಕನ್ನು ಕದಿಯುವುದು, ನಾಶ ಮಾಡುವುದಕ್ಕೆ ಸಾಧ್ಯವಿಲ್ಲ. ಬಿಜೆಪಿಯ ಮನುವಾದಿಗಳಿಗೆ ಸಂವಿಧಾನದ ಮೇಲೆ ಇನ್ನೂ ಗೌರವವಿಲ್ಲ. ಮನುವಾದಿಗಳು ಮತಗಳನ್ನು ಕದಿಯುವ ಪ್ರಯತ್ನ ಮಾಡುತ್ತಿದ್ದಾರೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ ಕಳ್ಳತನವಾಗಿದೆ ಎಂದು ರಾಹುಲ್ ಗಾಂಧಿ ಸಾಬೀತು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಎಂದೂ ರಾಜ್ಯದಲ್ಲಿ ಬಹುಮತ ಪಡೆದುಕೊಂಡಿಲ್ಲ. ಹಿಂಬಾಗಿಲಿಂದ ಅಧಿಕಾರಕ್ಕೆ ಬಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಮತದಾನ ಕದ್ದಿದ್ದಾರೆ. ಆಂತರಿಕ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಲೋಕಸಭಾ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಸ್ಪಷ್ಟತೆ ನಮಗಿತ್ತು. ಆದರೇ ಬಿಜೆಪಿಯವರು ಏಳು ಕ್ಷೇತ್ರಗಳಲ್ಲಿ ಮತ ಕದ್ದಿದ್ದಾರೆ ಎಂದು ಸಿಎಂ ಆರೋಪಿಸಿದ್ಧಾರೆ.
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಇವಿಎಂ ಮತಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಮತ ಕಳ್ಳತನವನ್ನು ಬಿಜೆಪಿ ಇಡೀ ದೇಶದಲ್ಲಿ ಮಾಡಿದ್ದಾರೆ. ಮೋದಿ ಮತ್ತು ಮೋದಿ ನೇತೃತ್ವದ ಎನ್.ಡಿಎ ಕೂಡ ಬಹುಮತ ಪಡೆದಿಲ್ಲ. ಇದೇ ರೀತಿ ಅಕ್ರಮ ದಾರಿ ಹಿಡಿದು ಅಧಿಕಾರ ಹಿಡಿದಿದ್ದಾರೆ. ಮೋದಿಗೆ ಪ್ರಧಾನಿ ಹುದ್ದೆಯಲ್ಲಿ ಕೂರಲು ನೈತಿಕತೆ ಇಲ್ಲ. ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗ ಬಿಜೆಪಿ ಹೇಳಿದಂತೆ ಕೆಲಸ ಮಾಡುತ್ತಿದೆ. ಇಂದು ನಾವು ಈ ಮತ ಕಳ್ಳತನದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದೇವೆ. ಇದು ರಾಷ್ಟ್ರದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆಯನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಮಾಡುತ್ತೇವೆ. ಬಿಜೆಪಿಯ ಕಳ್ಳ ಮಾರ್ಗವನ್ನು ನಾವು ಬಯಲಿಗೆಳೆಯುತ್ತೇವೆ ಎಂದು ಕಿಡಿ ಕಾರಿದ್ದಾರೆ.
ಸಂವಿಧಾನ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಸಂವಿಧಾನ ಉಳಿದರಷ್ಟೆ ಸಮಾನತೆ ಸಾಧ್ಯ. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವವರು, ಸಂವಿಧಾನದಲ್ಲಿ ನಂಬಿಕೆ ಇರುವವರು ಮಾತ್ರ ಅಧಿಕಾರಕ್ಕೆ ಬಂದರಷ್ಟೆ ಎಲ್ಲರಿಗೂ ಸಮಾನತೆ ಸಾಧ್ಯವಾಗುತ್ತದೆ ಎಂದಿದ್ದಾರೆ.