ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಪಟ್ಟಕ್ಕಾಗಿ ಕಿತ್ತಾಟಕ್ಕಿಂತಲೂ ಹೆಚ್ಚಾಗಿ ಆಂತರಿಕವಾಗಿ ಅವರದೇ ಎಂಎಲ್‌ಎಗಳ ವ್ಯಾಪಾರ ನಡೆಯುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಇಂದು ನಡೆದ ಸಂಸದ್ ಕ್ರೀಡಾ ಮಹೋತ್ಸವ ಸಮಾರೋಪ ಸಮಾರಂಭದ ಬಳಿಕ ಮಾತನಾಡಿದ ಛಲವಾದಿ, ಕಾಂಗ್ರೆಸ್ ಪಕ್ಷದವರಿಗೆ ತಮ್ಮದೇ ಪಕ್ಷದ ಶಾಸಕರನ್ನು ಖರೀದಿಸುವ ಪರಿಸ್ಥಿತಿ ಉದ್ಭವವಾಗಿದೆ ಎಂದು ಹೇಳಿದ್ದಾರೆ.
ಮೊದಲು ಒಬ್ಬೊಬ್ಬ ಶಾಸಕರನ್ನು ಖರೀದಿಸಲು 50 ಕೋಟಿ ರೂ. ಕೊಡುತ್ತಿದ್ದರು. ಈಗ ಸ್ವಲ್ಪ ಚೌಕಾಸಿ ಹೆಚ್ಚಾಗಿದ್ದು, ಕೆಲವರು 75 ಕೋಟಿ ರೂ. ಕೊಡಿ ಬರುತ್ತೇವೆ ಅಂತಿದ್ದಾರೆ. ಇನ್ನೂ ಕೆಲವರು 100 ಕೋಟಿ ರೂ.ಗೆ ತಲುಪಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಇವರು ಈಗ ಅಷ್ಟಾಗುವುದಿಲ್ಲ ಸದ್ಯಕ್ಕೆ ಇಷ್ಟಿದೆ ತೆಗೆದುಕೊಳ್ಳಿ, ಅದಕ್ಕೆ ಮೇಲೆ ಒಂದು ಫ್ಲ್ಯಾಟ್, ಜೊತೆಗೊಂದು ಫಾರ್ಚುನರ್ ಕಾರು ಕೊಡುತ್ತೇವೆ ಎನ್ನುತ್ತಿದ್ದಾರೆ. ಇಂಥ ಆಫರ್‌ಗಳು ಕಾಂಗ್ರೆಸ್‌ನಲ್ಲಿ ನಡೆಯುತ್ತಿವೆ ಎಂದಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳ ಜೊತೆಗೆ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈಗಾಗಲೇ ವ್ಯಾಪಾರ ಶುರು ಮಾಡಿದ್ದು, 200 ಕೋಟಿ ರೂ. ಕೊಡಬೇಕಂತೆ. ಶಾಸಕ ವೀರೇಂದ್ರ ಪಪ್ಪಿ ಅವರು ಮೊದಲೇ ಅಡ್ವಾನ್ಸ್ ಸಹ ಕೊಟ್ಟಿದ್ದಾರಂತೆ ಎಂದು ಆರೋಪಿಸಿದರು. ಜೊತೆಗೆ, ಈ ಬಗ್ಗೆ ತನಿಖೆ ಮಾಡಿ ಸುರ್ಜೇವಾಲರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೇ ಎರಡು, ಮೂರು, ನಾಲ್ಕೈದು ಪಕ್ಷಗಳಿವೆ. ಆದರೆ ಈಗ ಎರಡು ಪಕ್ಷಗಳು ದೊಡ್ಡದಾಗಿ ಕಾಣುತ್ತಿವೆ. ಒಂದು ಸಿಎಂ ಪಕ್ಷ, ಇನ್ನೊಂದು ಡಿಸಿಎಂ ಪಕ್ಷ. ಈ ಪಕ್ಷದಲ್ಲಿ ಇರುವವರನ್ನು ಅವರು ಖರೀದಿಗೆ, ಆ ಪಕ್ಷದಲ್ಲಿ ಇರುವವರನ್ನು ಇವರು ಖರೀದಿಗೆ ನೋಡುತ್ತಿದ್ದಾರೆ. ಈ ಕುದುರೆ ವ್ಯಾಪಾರದ ಕುರಿತು ತನಿಖೆಯಾಗಬೇಕು. ನಾನು ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೂ ಪತ್ರ ಕೂಡ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘ಕೆಲವರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ’ ಅನ್ನೋದನ್ನ ನಾನೋಪ್ಪಲ್ಲ : ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ಕೊಟ್ಟ ಸತೀಶ್



















