ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿವಾದ ಮತ್ತಷ್ಟು ತೀವ್ರಸ್ವರೂಪ ಪಡೆದುಕೊಂಡಿದೆ. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿಚಾರಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಹೇಳಿಕೆ ನೀಡಿದ್ದಾರೆ.
ಕುಣಿಗಲ್ ತಾಲೂಕಿನ ಎಲೆಯೂರಿನಲ್ಲಿ ನಡೆದ ವೈ.ಕೆ ರಾಮಯ್ಯಹೇಮಾವತಿ ಹೋರಾಟ ಸಮಿತಿ ನಡೆಸಿದ ಜಾಥಾದಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನ ರೈತರಿಗಾಗಿ ತಗ್ಗಿ ಬಗ್ಗಿ ನಡೆಯಲಿಕ್ಕೆ ಸಿದ್ದನಿದ್ದೇನೆ. ನೀವು ಪೈಪ್ ಲೈನ್ ಕಾಮಗಾರಿಗೆ ಅಡ್ಡಿ ಪಡಿಸಲು ನಿಂತರೆ, ಕುಣಿಗಲ್ ತಾಲೂಕಿನ ನಾವು ಗಂಡು ಮಕ್ಕಳು ಕಚ್ಚೆ ಕಟ್ಟಿ ಹೋರಾಟ ಮಾಡೋಕೆ ತಯಾರಿದ್ದೇವೆ. ಮುಂದಿನ ದಿನಗಳಲ್ಲಿ ಬೀದಿಗೆ ಇಳಿಯುತ್ತೇವೆ.
ನಮ್ಮ ತಾಲೂಕಿನ ನೀರಿಗಾಗಿ ಹೋರಾಟ ಮಾಡುತ್ತೇವೆ. ನಾನು ಸಹ ಕುಣಿಗಲ್ ತಾಲೂಕಿನ ಮಗನಾಗಿ ಆತ್ಮಹತ್ಯೆ ಮಾಡಿಕೊಳ್ಳೊಕೆ ಹಿಂದೆ ಮುಂದೆ ನೋಡಲ್ಲ. ನನ್ನ ತಾಲೂಕಿನ ರೈತರಿಗೊಸ್ಕರ ನನ್ನ ದೇಹ ತ್ಯಾಗಕ್ಕೂ ಸಿದ್ದನಿದ್ದೇನೆ. ನಮ್ಮೂರು ಎಲೆಯೂರಿನಲ್ಲಿ ಈ ಮಾತು ಹೇಳುತ್ತಿದ್ದೇನೆ. ನಾನು ಬಹಳ ತಾಳ್ಮೆಯಿಂದ ನೋಡುತ್ತಿದ್ದೇನೆ ಎಂದು ಶಾಸಕ ಡಾ.ರಂಗನಾಥ್ ಭಾವುಕ ಮಾತುಗಳನ್ನಾಡಿದ್ದಾರೆ.



















