ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯಾಗಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ʼತಪ್ಪಿತಸ್ಥ ಹುಡಗನಿಗೆ ಶಿಕ್ಷೆ ನೀಡಿ ಎಂದು ನಾನು ಹೇಳುತ್ತಿಲ್ಲ. ಮಗಳಿಗೆ ಮದುವೆ ಮಾಡಿಸಿ. ಈ ಹಿಂದೆಯೂ ನಾನು ಇದ್ದನ್ನೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಈಗ ಜನಿಸಿರುವ ಮಗುವಿಗೆ ನ್ಯಾಯಕೊಡಿಸಿ ಎಂದು ಹೋರಾಡುತ್ತಿದ್ದೇನೆʼ ಎಂದು ಸಂತ್ರಸ್ತೆಯ ತಾಯಿ ಶಾಸಕರ ಮುಂದೆ ಅವಲತ್ತುಕೊಂಡಿದ್ದಾರೆ.
ಸಂತ್ರಸ್ತೆಯ ತಾಯಿಗೆ ಸಮಾಧಾನ ಹೇಳಿದ ಶಾಸಕರು, ನಿಮ್ಮ ಪರವಾಗಿ ನಾನು ನಿಲ್ಲುತ್ತೇನೆ. ಕೆಲವು ರಾಜಕೀಯ ಪಕ್ಷಗಳಿಗೆ ಮತ್ತು ಸಂಘಟನೆಗಳಿಗೆ ಇದೊಂದು ರಾಜಕೀಯ ಅಸ್ತ್ರವಾಗಿದೆ. ಎರಡೂ ಕುಟುಂಬಗಳು ಒಂದಾಗುವುದು, ಒಟ್ಟಿಗೆ ಬಾಳುವುದು ಮುಖ್ಯ. ಹುಡುಗನ ಮನೆಯವರನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮದುವೆ ಮಾಡಿಸಿಕೊಡುವುದಾಗಿ ಹುಡುಗನ ತಂದೆ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಹುಡುಗನ ತಂದೆ ಬೇರೆ ರಾಜಕೀಯ ಪಕ್ಷದವರಾಗಿದ್ದರೂ ಈ ವಿಚಾರ ವೈಯಕ್ತಿಕ ವಿಚಾರ ಆಗಿರುವುದರಿಂದ ರಾಜಕೀಯಕ್ಕೆ ಇಳಿಯದೇ ಅವರಿಬ್ಬರು ಒಂದಾಗಿ ಬಾಳಬೇಕು ಎಂಬ ಉದ್ದೇಶದಿಂದ ದೂರು ಸಲ್ಲಿಸುವುದು ಬೇಡ ಎಂದು ಹೇಳಿದ್ದೆ. ಈಗ ಪರಿಸ್ಥಿತಿ ಬದಲಾಗಿದೆ.
ಹುಡುಗ ನಾಪತ್ತೆ ಬಳಿಕ ಎಸ್ಪಿ ಅವರೊಂದಿಗೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಹುಡುಗನನ್ನು ಬಂಧಿಸುವಂತೆ ಒತ್ತಡ ಹಾಕಿದ್ದೇನೆ. ಶುಕ್ರವಾರ ರಾತ್ರಿ ಯುವಕನ ಬಂಧನವಾಗಿದೆ. ಆದರೇ, ಎರಡು ಕುಟುಂಬಗಳು ಬೇರೆಯಾಗದೇ ಒಂದಾಗುವುದು ನನ್ನ ಆಸೆ ಮತ್ತು ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.