ಆಸ್ಟ್ರೇಲಿಯಾ ತಂಡದ ಬೌಲರ್ ಮಿಚೆಲ್ ಸ್ಟಾರ್ಕ್ ತಮ್ಮ ಹೆಸರಿಗೆ ಮತ್ತೊಂದು ಕೆಟ್ಟ ದಾಖಲೆ ಬರೆಯಿಸಿಕೊಂಡಿದ್ದಾರೆ.
ಟಿ20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಎಸೆದಿದ್ದ ಒಂದೇ ಓವರ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಬರೋಬ್ಬರಿ 28 ರನ್ ಚಚ್ಚಿದ್ದರು. ಅಲ್ಲದೇ, ಒಂದು ವೈಡ್ ಎಸೆಯುವ ಮೂಲಕ 29 ರನ್ ಕೊಡುಗೆಯಾಗಿ ನೀಡಿದ್ದರು. ಈಗ ಇಂಗ್ಲೆಂಡ್ ನ ಸ್ಪೋಟಕ ಆಟಗಾರ ಲಿಯಾಮ್ ಲಿವಿಂಗ್ ಸ್ಟೋನ್ ಕೂಡ ಸ್ಟಾರ್ಕ್ ಎಸೆದ ಒಂದೇ ಎಸೆತದಲ್ಲಿ 28 ರನ್ ಚಚ್ಚಿದ್ದಾರೆ. ಒಂದೇ ಓವರ್ ನಲ್ಲಿ 4 ಸಿಕ್ಸ್ ಹಾಗೂ 1 ಫೋರ್ ಬಾರಿಸಿದ್ದಾರೆ. ಈ ಮೂಲಕ ತಂಡದ ಮೊತ್ತ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಗೆಲುವಿಗೆ ಕಾರಣರಾಗಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಲಿವಿಂಗ್ ಸ್ಟೋನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಕೇವಲ 27 ಎಸೆತಗಳನ್ನು ಎದುರಿಸಿದ ಲಿವಿಂಗ್ ಸ್ಟೋನ್ 7 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 62 ರನ್ ಗಳಿಸಿದ್ದರು. 62 ರನ್ ಗಳಲ್ಲಿ 28 ರನ್ ಬಂದಿರುವುದು ಸ್ಟಾರ್ಕ್ ಎಸೆದ ಒಂದೇ ಓವರ್ ನಲ್ಲಿ ಎನ್ನುವುದು ವಿಶೇಷ.
ಈ ಮೂಲಕ ಮಿಚೆಲ್ ಸ್ಟಾರ್ಕ್ ಹೆಸರಿಗೆ ಅನಗತ್ಯ ದಾಖಲೆಯೊಂದು ಸೇರಿಕೊಂಡಿದೆ. ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಒಂದೇ ಓವರ್ ನಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ಹಣೆಪಟ್ಟಿ ಈಗ ಸ್ಟಾರ್ಕ್ ಹೆಸರಿಗೆ ಬಂದಿದೆ. ಆ್ಯಡಂ ಝಂಪಾ ಹಾಗೂ ಕ್ಯಾಮರೋನ್ ಗ್ರೀನ್ ಹೆಸರಿನಲ್ಲಿ ಹಿಂದೆ ಕೆಟ್ಟ ದಾಖಲೆ ಇತ್ತು. ಈಗ ಇದನ್ನು ಮಿಚೆಲ್ ತಮ್ಮ ಪಾಲಿಗೆ ಪಡೆದಿದ್ದಾರೆ. ಆ್ಯಡಂ ಝಂಪಾ ಒಂದೇ ಓವರ್ನಲ್ಲಿ 26 ರನ್ ನೀಡಿದ್ದರು. 2023 ರಲ್ಲೇ ಕ್ಯಾಮರೋನ್ ಗ್ರೀನ್ ಭಾರತದ ವಿರುದ್ಧ ಪಂದ್ಯದಲ್ಲಿ 26 ರನ್ ಬಿಟ್ಟುಕೊಟ್ಟಿದ್ದರು. ಈಗ 28 ರನ್ ಚಚ್ಚಿಸಿಕೊಂಡು ಕೆಟ್ಟ ದಾಖಲೆಯನ್ನು ಮಿಚೆಲ್ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಮಳೆಯಿಂದಾಗಿ ಈ ಪಂದ್ಯವನ್ನು ಕೇವಲ 39 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿತ್ತು. ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 24.4 ಓವರ್ಗಳಲ್ಲಿ 126 ರನ್ ಗಳಿಸಿ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು.