:
ನವದೆಹಲಿ: ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿದ್ದ, ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡೀಸ್ ಚಿತ್ರಕ್ಕೆ ಈಗ ಕೃತಿಚೌರ್ಯದ ಕಳಂಕ ಎದುರಾಗಿದೆಯೇ?
ಹೌದು, ಎಲ್ಲರಿಂದ ಮೆಚ್ಚುಗೆ ಪಡೆದ ಈ ಸಿನಿಮಾ ಕುರಿತು ಕೃತಿಚೌರ್ಯದ ಆರೋಪ ಕೇಳಿಬರಲಾರಂಭಿಸಿದೆ. ಸಾಮಾಜಿಕ ಮಾಧ್ಯಮದ ಹಲವು ಬಳಕೆದಾರರು ಲಾಪತಾ ಲೇಡೀಸ್ ಚಿತ್ರವನ್ನು 2019ರಲ್ಲಿ ತೆರೆಕಂಡಿದ್ದ ಅರೇಬಿಕ್ ಚಿತ್ರ “ಬುರ್ಕಾ ಸಿಟಿ”ಯೊಂದಿಗೆ ಹೋಲಿಕೆ ಮಾಡಿ ಪೋಸ್ಟ್ ಗಳನ್ನು ಮಾಡಲಾರಂಭಿಸಿದ್ದಾರೆ. ಬುರ್ಖಾ ಸಿಟಿ ಸಿನಿಮಾದ ಕೆಲವು ದೃಶ್ಯಗಳನ್ನು ಒಳಗೊಂಡ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಈ ಊಹಾಪೋಹಗಳು ಬಲಗೊಳ್ಳಲಾರಂಭಿಸಿವೆ.
ವೈರಲ್ ಆಗಿರುವ ವಿಡಿಯೋ ತುಣುಕುಗಳು ಕಿರಣ್ ರಾವ್ ಅವರ ಚಿತ್ರದ ನೈಜತೆಯ ಬಗ್ಗೆ ಪ್ರಶ್ನೆಯೇಳುವಂತೆ ಮಾಡಿದೆ. ಹೊಸದಾಗಿ ಮದುವೆಯಾದ ವ್ಯಕ್ತಿಯೊಬ್ಬನ ಪತ್ನಿಯು(ಬುರ್ಖಾ ಧರಿಸಿರುತ್ತಾಳೆ) ಅದಲುಬದಲಾಗಿದ್ದು, ತನ್ನ ನೈಜ ಪತ್ನಿಯನ್ನು ಹುಡುಕುತ್ತಾ ಆ ವ್ಯಕ್ತಿ ಪೊಲೀಸ್ ಠಾಣೆಗೆ ಅಲೆದಾಡುತ್ತಿರುವ ದೃಶ್ಯ ಇದಾಗಿದೆ. ಈ ದೃಶ್ಯವು ಲಾಪತಾ ಲೇಡೀಸ್ ಚಿತ್ರದಲ್ಲಿರುವ ದೃಶ್ಯಗಳಿಗೆ ಹೋಲುತ್ತಿವೆ.
ಹೀಗಾಗಿ ಕಿರಣ್ ರಾವ್ ಅವರು ಅರೇಬಿಕ್ ಚಿತ್ರವನ್ನು ನಕಲು ಮಾಡಿದ್ದಾರೆಯೇ ಎಂದು ಹಲವು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು, ಕಿರಣ್ ರಾವ್ ಅವರು ಅರೇಬಿಕ್ ಸಿನಿಮಾದಿಂದ ಪ್ರೇರಿತರಾಗಿ ಈ ಚಿತ್ರ ನಿರ್ಮಿಸಿರಬಹುದು. ಅದು ಕಾಪಿ ಅಲ್ಲ ಎಂದು ವಾದಿಸಿದ್ದಾರೆ.
“ಇನ್ನು ಏನೂ ಮಾಡಲು ಸಾಧ್ಯವಿಲ್ಲ… ಲಾಪತಾ ಲೇಡೀಸ್ ಚಿತ್ರ ಅಸಲಿ ಎಂಬ ಭಾವನೆ ನನ್ನಲ್ಲಿತ್ತು. ಇರಲಿ, ಪರವಾಗಿಲ್ಲ. ಆದರೆ, ಈ ಚಿತ್ರವು ಅರಿಜಿತ್ ಅವರ “ಸಜ್ನಿ ರೇ” ಎಂಬ ಸುಂದರವಾದ ಹಾಡನ್ನು ನೀಡಿರುವುದು ಸಮಾಧಾನದ ಸಂಗತಿ” ಎಂದು ಕೆಲವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಚಿತ್ರವು ಕೃತಿಚೌರ್ಯದ ಸಮಸ್ಯೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಜುಲೈ 2024 ರಲ್ಲಿ, ನಟ ಅನಂತ್ ಮಹಾದೇವನ್ ಅವರು ಕೂಡ ಲಾಪತಾ ಲೇಡೀಸ್ ಚಿತ್ರದ ನೈಜತೆ ಬಗ್ಗೆ ಪ್ರಶ್ನಿಸಿದ್ದರು. ಇದು ನನ್ನ ಚೊಚ್ಚಲ ನಿರ್ದೇಶನದ ಘೂಂಘತ್ ಕೆ ಪಟ್ ಖೋಲ್ (1999) ಸಿನಿಮಾಗೆ ಹೋಲುತ್ತದೆ ಎಂದು ಆರೋಪಿಸಿದ್ದರು.
ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡೀಸ್ ಚಿತ್ರದಲ್ಲಿ ಪ್ರತಿಭಾ ರಾಂಟಾ, ನಿತಾನ್ಶಿ ಗೋಯೆಲ್ ಮತ್ತು ಸ್ಪರ್ಶ್ ಶ್ರೀವಾಸ್ತವ ನಟಿಸಿದ್ದಾರೆ. 2001ರಲ್ಲಿ ಗ್ರಾಮೀಣ ಭಾರತದಲ್ಲಿ ಚಿತ್ರೀಕರಿಸಲಾದ ಈ ಚಿತ್ರವು ರೈಲು ಪ್ರಯಾಣದ ಸಮಯದಲ್ಲಿ ಆಕಸ್ಮಿಕವಾಗಿ ವಿನಿಮಯವಾದ ಇಬ್ಬರು ವಧುಗಳ ಕಥಾಹಂದರವನ್ನು ಒಳಗೊಂಡಿದೆ. ಅವರ ಗಂಡಂದಿರು ತಮ್ಮ ಪತ್ನಿಯರನ್ನು ಹುಡುಕಲು ಆರಂಭಿಸಿದ ಬಳಿಕ, ಸಿನಿಮಾವು ಹಲವು ಅನಿರೀಕ್ಷಿತ ತಿರುವುಗಳನ್ನು ಕಾಣುತ್ತದೆ. ಈ ಚಿತ್ರವನ್ನು ಬಾಲಿವುಡ್ ನಟ ಅಮೀರ್ ಖಾನ್ ನಿರ್ಮಿಸಿದ್ದಾರೆ. ರವಿ ಕಿಶನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.