ಕೊಡಗು: ಕೊಡಗಿನ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಟ್ರೆಕ್ಕಿಂಗ್ ತೆರಳಿದ್ದ ಕೇರಳ ಮೂಲದ ಯುವತಿ ನಾಪತ್ತೆಯಾಗಿ ನಾಲ್ಕು ದಿನಗಳಾದರೂ ಆಕೆಯ ಸುಳಿವು ಮಾತ್ರ ಈವರೆಗೂ ಸಿಕ್ಕಿಲ್ಲ.
ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ ಕೇರಳದ ಕೋಯಿಕ್ಕೋಡ್ ನಿವಾಸಿ 35 ವರ್ಷದ ಶರಣ್ಯಾ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದರಿಂದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿದ್ದಳು. ಬೆಳಗ್ಗೆ 8.30ರ ಸುಮಾರಿಗೆ ಟ್ರೆಕ್ಕಿಂಗ್ಗೆ ತೆರಳಲು ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಬಳಿ ಈಕೆ ಬಂದಿದ್ದಳು. ಆದ್ರೆ ಒಬ್ಬೊಬ್ಬರನ್ನೇ ಟ್ರೆಕ್ಕಿಂಗ್ ಬಿಡದ ಕಾರಣ ಬೇರೊಂದು ಗ್ರೂಪ್ ಬಂದ ಬಳಿಕ ಅವರ ಜೊತೆ ಈಕೆಯನ್ನ ಕಳುಹಿಸಲಾಗಿತ್ತು. ಆದ್ರೆ ಶರಣ್ಯಾ ಬೆಟ್ಟದಿಂದ ವಾಪಸ್ ಬಾರದ ಕಾರಣ, ಆಕೆಗಾಗಿ ಕಳೆದ ಮೂರು ದಿನಗಳಿಂದ ಶೋಧ ನಡೆಯುತ್ತಿದೆ.
ಬೆಳಿಗ್ಗೆ ಟ್ರೆಕ್ಕಿಂಗ್ಗೆಂದು ತೆರಳಿದ್ದವರು ಮಧ್ಯಾಹ್ನ 1.30ರ ವೇಳೆಗೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಹಿಂದಿರುಗಬೇಕಿತ್ತು. ಹೀಗಾಗಿ ಶರಣ್ಯಾಳನ್ನು ಕರೆದೊಯ್ಯಲೆಂದು ಹೋಮ್ ಸ್ಟೇ ಮಾಲೀಕ ತಮ್ಮ ಸ್ಕೂಟಿ ಸಮೇತ ಸ್ಥಳಕ್ಕೆ ಬಂದಿದ್ದರು. ಆ ಬಳಿಕ ಶರಣ್ಯಾಗೆ ಅವರು ಕರೆ ಮಾಡಿದಾಗ ಮೊದಲು ನಾಟ್ ರೀಚೇಬಲ್ ಬಂದಿದೆ. ಮತ್ತೆರಡು ಬಾರಿ ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ ಆಕೆ, ತಾನು ದಾರಿ ತಪ್ಪಿದ್ದೇನೆ ಎಂದು ಹೇಳಿದ್ದಾಳೆ. ಅಷ್ಟರಲ್ಲಿ ಫೋನ್ ಕಟ್ ಆಗಿದೆಯಂತೆ. ಅದಾದ ಬಳಿಕ ಫೋನ್ ಮತ್ತೆ ಕನೆಕ್ಟ್ ಆಗಿಲ್ಲ. ಕೂಡಲೇ ಅವರು ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದು, ಎಲ್ಲರೂ ಸೇರಿ ಸಂಜೆ ಬೆಟ್ಟದ ಮೇಲೆ ಹೋಗಿದ್ದಾರೆ. ಅದ್ರೆ ಅಲ್ಲೆಲ್ಲೂ ಯುವತಿ ಕಂಡಿಲ್ಲ. ಹಾಗಾಗಿ ಮತ್ತಷ್ಟು ಅರಣ್ಯ ಇಲಾಖೆ, ಪೊಲಿಸ್ ಇಲಾಖೆ ಸಿಬ್ಬಂದಿ ಸೇರಿ ಸ್ಥಳೀಯರೆಲ್ಲರೂ ಯುವತಿಗಾಗಿ ಹುಡುಕಿದ್ದಾರೆ. ಆದ್ರೆ ಎಲ್ಲೂ ಕೂಡ ಆಕೆಯ ಸುಳಿವೇ ಸಿಕ್ಕಿಲ್ಲ. ಈ ಕಾರ್ಯಾಚರಣೆ ನಾಲ್ಕು ದಿನ ಕಳೆದರೂ ಶರಣ್ಯಾ ಪತ್ತೆ ಮಾತ್ರ ಆಗಿಲ್ಲ.
ಅರಣ್ಯ ಮತ್ತು ಪೊಲೀಸ್ ಇಲಾಖೆ ಹಾಗೂ ನಕ್ಸಲ್ ನಿಗ್ರಹ ಪಡೆಯ 60ಕ್ಕೂ ಅಧಿಕ ಸಿಬ್ಬಂದಿ, ಸ್ಥಳೀಯರು ಕಾರ್ಯಾಚರಣೆ ನಡೆಸುತ್ತಿದ್ದು, ವಿಚಿತ್ರ ಅಂದ್ರೆ ಶರಣ್ಯಾ ಕಳೆದ 15 ವರ್ಷಗಳಿಂದ ಟ್ರೆಕ್ಕಿಂಗ್ ಹೋಗಿ ಅನುಭವ ಹೊಂದಿರುವ ಯುವತಿ. ಹಾಗಾಗಿ ಆಕೆ ದಾರಿ ಮಿಸ್ ಆಗಿ ನಾಪತ್ತೆಯಾಗುವ ಸಾಧ್ಯತೆ ಕಡಿಮೆ. ಆ ಕಾರಣಕ್ಕೆ ಕಾಡು ಪ್ರಾಣಿಗಳ ದಾಳಿಗೆ ಯುವತಿ ತುತ್ತಾಗಿರಬಹುದಾ ಎಂಬ ಶಂಕೆ ಶುರುವಾಗಿದೆ. ಅದೂ ಅಲ್ಲದೆ ಬೆಟ್ಟದ ದಾರಿ ಬಹಳ ಸ್ಪಷ್ಟವಾಗಿದ್ದು, ಎಲ್ಲಿಯೂ ದಾರಿ ತಪ್ಪುವ ಸಾಧ್ಯತೆ ಇಲ್ಲ. ಹೀಗಿರುವಾಗ ಟ್ರೆಕ್ಕಿಂಗ್ ಅನುಭವ ಇರುವ ಈಕೆ ಹೇಗೆ ದಾರಿ ತಪ್ಪುತ್ತಾಳೆ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ. ಅದೂ ಅಲ್ಲದೆ, ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿಯ ಸಿಸಿಟಿವಿ ಕೆಲಸ ಮಾಡದೆ ಇರೋದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಯುವತಿಯ ಹುಡುಕಾಟಕ್ಕೆ ಡ್ರೋನ್ ಮತ್ತು ಡಾಗ್ ಸ್ಕ್ವಾಡ್ ಕೂಡ ಬಳಕೆ ಮಾಡಿದರೂ ಈ ಕ್ಷಣದವರೆಗೆ ಶರಣ್ಯ ಪತ್ತೆಯಾಗಿಲ್ಲ. ಸರ್ಚಿಂಗ್ ಆಪರೇಷನ್‌ಗೆ ಸ್ಥಳೀಯ ಗ್ರಾಮದ ಯುವಕರು ಸಾಥ್ ನೀಡಿದ್ದಾರೆ. ದಟ್ಟವಾದ ಕಾಡು, ದುರ್ಗಮ ರಸ್ತೆ, ಮಳೆ & ಕಾಡಾನೆಗಳು ಕಾರ್ಯಾಚರಣೆಗೆ ಸವಾಲು ಎದುರಾದರೂ ಹಗಲೂ ರಾತ್ರಿ ಎನ್ನದೇ ಸರ್ಚಿಂಗ್ ಆಪರೇಷನ್ ಮುಂದುವರೆದಿದೆ. ಸದ್ಯ ಶರಣ್ಯ ಸುರಕ್ಷಿತವಾಗಿ ಮರಳಲೆಂದು ಕುಡಿಯ ಜನಾಂಗದ ಮಲೆ ತಮ್ಮಚ್ಚ ದೇವರಿಗೆ ಬೆಟ್ಟ ತಪ್ಪಲಿನ ಗ್ರಾಮಸ್ಥರ ಹರಕೆ ಹೋತ್ತಿದ್ದಾರೆ.
ಇದನ್ನೂ ಓದಿ : ವಾಹನದ ನಂಬರ್ ಪ್ಲೇಟ್ ಬದಲಾಯಿಸಿ ಗೋ ಕಳ್ಳತನಕ್ಕೆ ಯತ್ನ!


















