ಮಂಗಳೂರು: ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಧರ್ಮಸ್ಥಳದ ಪವಿತ್ರ ನದಿ ನೇತ್ರಾವತಿಯಲ್ಲಿ ದುಷ್ಕರ್ಮಿಗಳು 11 ಮೂಟೆಗಳಲ್ಲಿ ಗೋಮಾಂಸ ತ್ಯಾಜ್ಯ ಎಸೆದಿರುವ ಘಟನೆ ಬೆಳಕಿಗೆ ಬಂದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಎಂಬಲ್ಲಿ ದುಷ್ಕರ್ಮಿಗಳು ಗೋಮಾಂಸ ತ್ಯಾಜ್ಯ ಎಸೆದಿದ್ದಾರೆ. ಈ ಪ್ರದೇಶದಲ್ಲಿ ನೇತ್ರಾವತಿ ನದಿಯಲ್ಲಿ ಉಪನದಿಯಾಗಿರುವ ಮೃತ್ಯುಂಜಯ ಸಂಗಮವಾಗುತ್ತದೆ. ಈ ಪ್ರದೇಶದಲ್ಲೇ ಗೋಮಾಂಸ ಎಸೆದಿದ್ದಾರೆ.
ಪ್ರತಿ ದಿನ ಲಕ್ಷಾಂತರ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡಿ ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೇತ್ರಾವತಿಯ ನದಿಯ ನೀರನ್ನು ಬಳಸಲಾಗುತ್ತಿದೆ. ಹೀಗಾಗಿ ಈ ನದಿ ಕೋಟ್ಯಾಂತರ ಭಕ್ತರ ಪಾಲಿಗೆ ಪವಿತ್ರವಾಗಿದೆ. ಆದರೆ, ಈ ಭಕ್ತರ ನಂಬಿಕೆಗೆ ದುಷ್ಕರ್ಮಿಗಳು ಈ ರೀತಿ ಘಾಸಿ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಹಿಂದೂಪರ ಸಂಘಟನೆಗಳು ಈ ಕೃತ್ಯವನ್ನು ಖಂಡಿಸಿದ್ದು, ಕೂಡಲೇ ಪೊಲೀಸರು ಈ ಕುರಿತು ಕ್ರಮ ವಹಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ಭಕ್ತರ ನಂಬಿಕೆಗೆ ನ್ಯಾಯ ಒದಗಿಸಬೇಕು. ಅಲ್ಲದೇ, ಮುಂದೆ ಪವಿತ್ರ ಸ್ಥಳಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿವೆ.