ತಿರುನೆಲ್ವೇಲಿ: ಪರೀಕ್ಷೆ ಬರೆಯಲು ತೆರಳುತ್ತಿದ್ದ ದಲಿತ ವಿದ್ಯಾರ್ಥಿಯ(Dalit student) ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ಹಲ್ಲೆ ನಡೆಸಿದ್ದಲ್ಲದೇ, ಬಾಲಕನ ಬೆರಳುಗಳನ್ನು ಕತ್ತರಿಸಿದ ಅಮಾನವೀಯ ಘಟನೆ (Crime news) ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.
ದಿನಗೂಲಿ ಕಾರ್ಮಿಕ ತಂಗ ಗಣೇಶ್ ಅವರ ಪುತ್ರ ದೇವೇಂದ್ರನ್ ಸೋಮವಾರ ಬೆಳಗ್ಗೆ ಪರೀಕ್ಷೆ ಬರೆಯಲೆಂದು ತನ್ನ ಮನೆಯಿಂದ ಪಳಯಂಕೊಟ್ಟೈನಲ್ಲಿರುವ ತನ್ನ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ದೇವೇಂದ್ರನ್ ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ, ಮಾರ್ಗಮಧ್ಯೆ ಕ್ರಾಸಿಂಗ್ ನಲ್ಲಿ ಮೂವರು ವ್ಯಕ್ತಿಗಳು ಬಸ್ ಅನ್ನು ತಡೆದಿದ್ದಾರೆ. ನಂತರ ಒಳನುಗ್ಗಿದ ಅವರು ದೇವೇಂದ್ರನ್‌ನನ್ನು ಬಸ್‌ನಿಂದ ಹೊರಗೆ ದರದರನೆ ಎಳೆದುಕೊಂಡು ಹೋಗಿ ಅವನ ಎಡಗೈಯ ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ. ಈ ದುಷ್ಕರ್ಮಿಗಳ ಗುಂಪು ದೇವೇಂದ್ರನ್ ತಂದೆ ತಂಗ ಗಣೇಶ್ ಅವರ ಮೇಲೂ ಹಲ್ಲೆ ನಡೆಸಿದ್ದು, ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ.
ತಂಗ ಗಣೇಶ್ ಅವರು ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಅರಿಯನಾಯಕಪುರಂ ಎಂಬ ಹಳ್ಳಿಯ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದರು. ದಾಳಿಯ ವೇಳೆ ಇತರೆ ಪ್ರಯಾಣಿಕರು ಜಮಾಯಿಸಿ, ಮಧ್ಯಪ್ರವೇಶಿಸಿದಾಗ ಹಲ್ಲೆ ನಡೆಸಿದ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದೆ. ಬಾಲಕ ದೇವೇಂದ್ರನ್‌ನನ್ನು ಶ್ರೀವೈಕುಂಟಂ ಸರ್ಕಾರಿ ಆಸ್ಪತ್ರೆಗೆ ಒಯ್ದು, ಅಲ್ಲಿಂದ ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವನ ಬೆರಳುಗಳನ್ನು ಮತ್ತೆ ಜೋಡಿಸಲು ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ,
ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತ ವಯಸ್ಸಿನವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏತನ್ಮಧ್ಯೆ, ಇತ್ತೀಚೆಗೆ ನಡೆದ ಕಬಡ್ಡಿ ಪಂದ್ಯಕ್ಕೆ ಪ್ರತೀಕಾರವಾಗಿ ಈ ಹಲ್ಲೆ ನಡೆಸಲಾಗಿದೆ ಎಂದು ದೇವೇಂದ್ರನ್ ಕುಟುಂಬ ಆರೋಪಿಸಿದೆ. ಕಬಡ್ಡಿ ಪಂದ್ಯದಲ್ಲಿ ಸವರ್ಣಿಯ ಹಿಂದೂಗಳ ಎದುರಾಳಿ ತಂಡವನ್ನು ಸೋಲಿಸುವಲ್ಲಿ ಬಾಲಕ ದೇವೇಂದ್ರನ್ ಪ್ರಮುಖ ಪಾತ್ರ ವಹಿಸಿದ್ದ. ದೇವೇಂದ್ರನ್ ಅತ್ಯುತ್ತಮ ಕಬಡ್ಡಿ ಆಟಗಾರನಾಗಿದ್ದ. ಇದನ್ನು ಸಹಿಸಲಾಗದೇ ಸವರ್ಣೀಯರೇ ಈ ಕುಕೃತ್ಯ ಎಸಗಿದ್ದಾರೆ ಎಂದು ಬಾಲಕನ ಕುಟುಂಬ ಆರೋಪಿಸಿದೆ.
ದೇವೇಂದ್ರನ್ ಅವರ ತಂದೆ ಕೂಡ ಇದು ಜಾತಿ ಸಂಬಂಧಿತ ಅಪರಾಧ ಎಂದು ಆರೋಪಿಸಿದ್ದಾರೆ. “ಸಮೀಪದ ಗ್ರಾಮದ ಥೇವರ್ ಸಮುದಾಯಕ್ಕೆ ಸೇರಿದ ಮೂವರು ಪುರುಷರು ನನ್ನ ಮೇಲೆ ಹಲ್ಲೆ ನಡೆಸಿದರು. ಇದು ಜಾತಿ ಸಂಬಂಧಿತ ಅಪರಾಧ. ನಾವು ಎಸ್ಸಿ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದವರು” ಎಂದು ತಂಗ ಗಣೇಶ್ ಹೇಳಿದ್ದಾರೆ.
ಇನ್ನು, ದೇವೇಂದ್ರನ್ ಅವರ ಚಿಕ್ಕಪ್ಪ ಸುರೇಶ್ ಮಾತನಾಡಿ, “ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ನಾವು ಎಸ್ಸಿ ಸಮುದಾಯಕ್ಕೆ ಸೇರಿದವರು. ನಾವು ಜೀವನದಲ್ಲಿ ಮುಂದೆ ಬರಬಾರದು, ಏನನ್ನೂ ಸಾಧಿಸಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ದೇವೇಂದ್ರನ್ ಚೆನ್ನಾಗಿ ಓದುತ್ತಿದ್ದ. ಕಲಿಯುವುದಲ್ಲಿ ಮುಂದಿದ್ದ. ನಾವು ಜೀವನದಲ್ಲಿ ಮುಂದೆ ಬರುವುದನ್ನು ಅವರು ಏಕೆ ದ್ವೇಷಿಸುತ್ತಾರೆಂದೇ ನನಗೆ ಅರ್ಥವಾಗುತ್ತಿಲ್ಲ. ಬಂಧಿತರಲ್ಲಿ ಕೆಲವರು 11ನೇ ತರಗತಿಯಲ್ಲಿ ಓದುತ್ತಿದ್ದವರು. ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಯಾರೋ ಅವರಿಗೆ ಈ ರೀತಿ ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.