ತುಮಕೂರು: ದುರ್ಷರ್ಮಿಯೊಬ್ಬ ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಘಟನೆಯೊಂದು ನಡೆದಿದೆ.
ಈ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಡಿಗ್ರಿ ಕಾಲೇಜು ಬಳಿ ನಡೆದಿದೆ. ಕೃತ್ಯ ನಡೆಸಿದ ಕೆಲವೇ ಕೆಲವು ಗಂಟೆಗಳಲ್ಲಿ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊರಟಗೆರೆ ಮೂಲದ ಕಾರ್ತಿಕ್ (35) ಬಂಧಿತ ಆರೋಪಿ. ಸಂತೋಷ್ ಎಂಬುವರಿಗೆ ಸೇರಿದ ಅಪ್ಪಚ್ಚಿ ಹಾಗೂ ಹೋಂಡಾ ಆಕ್ಟಿವ್ ಬೈಕ್ ಗೆ ಬಂಧಿತ ಆರೋಪಿ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಎಂದಿನಂತೆ ತಮ್ಮ ಅಂಗಡಿ ಬಳಿ ಬೈಕ್ ಗಳನ್ನು ಸಂತೋಷ್ ಪಾರ್ಕಿಂಗ್ ಮಾಡಿದ್ದರು. ಆದರೆ, ಗುರುವಾರ ರಾತ್ರಿ 10 ಗಂಟೆ ವೇಳೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿ ಕಾರ್ತಿಕ್, ಎರಡು ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಬೆಂಕಿ ಕೆನ್ನಾಲಿಗೆಗೆ ಎರಡು ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬಂದು ಬೆಂಕಿ ಆರಿಸಲು ಯತ್ನಿಸಿದರು. ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಆಧರಿಸಿ ಬೆಂಕಿ ಹಚ್ಚಿದ್ದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಕಿ ಇಟ್ಟ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊರಟಗೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹಳೆಯ ದ್ವೇಷದಿಂದಾಗಿ ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.