ನವದೆಹಲಿ: ದೆಹಲಿಯ ಉತ್ತಮ್ ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, 17 ವರ್ಷ ವಯಸ್ಸಿನ ಮೂವರು ಅಪ್ರಾಪ್ತ ಬಾಲಕರು ಸೇರಿ 24 ವರ್ಷದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ತಮ್ಮ ಮಂಗಳಮುಖಿ ಸ್ನೇಹಿತೆಯ ಕೊಲೆಗೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಮೃತನನ್ನು ಕಾಳಿ ಬಸ್ತಿ ನಿವಾಸಿ ರಾಹುಲ್ ಮಹ್ತೋ ಎಂದು ಗುರುತಿಸಲಾಗಿದ್ದು, ಆತ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ದೆಹಲಿ ಪೊಲೀಸರ ಪ್ರಕಾರ, ರಾತ್ರಿ ಸುಮಾರು 10 ಗಂಟೆಗೆ ರಾಹುಲ್ ಬೀದಿಬದಿಯ ಆಹಾರ ಮಳಿಗೆಯೊಂದರ ಬಳಿ ನಿಂತಿದ್ದಾಗ ಈ ದಾಳಿ ನಡೆದಿದೆ.
ಅದೇ ಮಳಿಗೆಯಲ್ಲಿದ್ದ ಮೂವರು ಅಪ್ರಾಪ್ತರು, ರಾಹುಲ್ ಮಹ್ತೋರ ಎದೆ, ಹೊಟ್ಟೆ ಮತ್ತು ಭುಜದ ಭಾಗಗಳಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡ ರಾಹುಲ್ ಸ್ಥಳದಲ್ಲೇ ಕುಸಿದುಬಿದ್ದಿದ್ದು, ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಕೃತ್ಯದ ಹಿಂದೆ ಪ್ರತೀಕಾರದ ಉದ್ದೇಶವಿದೆ ಎಂದು ಹೇಳಲಾಗಿದೆ. ಒಂದೂವರೆ ವರ್ಷದ ಹಿಂದೆ, ಕೊಲೆಯಾದ ರಾಹುಲ್‌ನ ಸಹೋದರನು ಈ ಅಪ್ರಾಪ್ತ ಹುಡುಗರ ಮಂಗಳಮುಖಿ ಸ್ನೇಹಿತೆಯನ್ನು ಕೊಲೆ ಮಾಡಿದ್ದನು. ಆ ಕೊಲೆಗೆ ಸೇಡು ತೀರಿಸಿಕೊಳ್ಳಲು ಈ ಮೂವರು ಬಾಲಕರು ಸಂಚು ರೂಪಿಸಿ ರಾಹುಲ್ ನನ್ನು ಹತ್ಯೆ ಮಾಡಿದ್ದಾರೆ.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:
ಆಹಾರ ಮಳಿಗೆಯ ಮಾಲೀಕರು ಈ ಸಂಪೂರ್ಣ ದಾಳಿಯನ್ನು ಕಣ್ಣಾರೆ ಕಂಡಿದ್ದು, ಅವರ ಹೇಳಿಕೆಯನ್ನು ಪೊಲೀಸರು ಸಾಕ್ಷಿಯಾಗಿ ದಾಖಲಿಸಿಕೊಂಡಿದ್ದಾರೆ. ಘಟನೆಯ ನಂತರ ತನಿಖೆ ಆರಂಭಿಸಿದ ದೆಹಲಿ ಪೊಲೀಸರು, ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆಯ ವೇಳೆ, ಮೂವರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಸಹ ಅವರಿಂದ ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ವಿಧಿವಿಜ್ಞಾನ ಮತ್ತು ಅಪರಾಧ ಸ್ಥಳ ಪರಿಶೀಲನಾ ತಂಡಗಳು ಸ್ಥಳವನ್ನು ಪರಿಶೀಲಿಸಿವೆ. ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಅಥವಾ ಇದರ ಹಿಂದೆ ದೊಡ್ಡ ಜಾಲವಿದೆಯೇ ಎಂದು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.