ಬೆಂಗಳೂರು: ಒಂದು ಕಾಲದಲ್ಲಿ ಆತ್ಮೀಯರಾಗಿದ್ದ ಸ್ನೇಹಿತರು ಇಂದು ಬದ್ಧ ಶತ್ರುಗಳಾಗಿದ್ದಾರೆ. ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಗರಂ ಆಗಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ (Radha Mohan Das Agarwal) ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ (BJP Core Committee Meeting) ಮಂಗಳವಾರ ನಡೆದಿತ್ತು. ಈ ವೇಳೆ ಬಂಗಾರು ಹನುಮಂತು ಸೋಲಿಗೆ ಮಾಜಿ ಸಚಿವ ಶ್ರೀರಾಮುಲು (Shriramulu) ಕಾರಣ ಎಂದು ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು.
ದೂರು ನೀಡಿದ್ದ ಬಂಗಾರು ಹನುಮಂತು
ಸೋಲಿಗೆ ಮಾಜಿ ಸಚಿವ ಶ್ರೀರಾಮುಲು ಕಾರಣ ಎಂದು ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಹೈಕಮಾಂಡ್ ಗೆ ನೀಡಿದ್ದ ದೂರಿನ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಗರಂ ಆಗಿರುವ ಶ್ರೀರಾಮುಲು, ರಾಧಾಮೋಹನ ದಾಸ್ ಅಗರವಾಲ್ ವಿರುದ್ಧ ಆರೆಸ್ಸೆಸ್ ನಾಯಕರಿಗೆ ದೂರು ನೀಡಿದ್ದಾರೆ. ಅಲ್ಲದೇ, ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಗರಂ ಆಗಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಿಲ್ಲ. ಈ ವಿಚಾರವನ್ನು ರಾಜ್ಯಾಧ್ಯಕರಿಗೂ ತಿಳಿಸಿದ್ದೇನೆ. ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳಿರುವುದು ಸ್ಪಷ್ಟವಾಗಿದೆ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ರಾಧಾಮೋಹನ್ ದಾಸ್ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.