ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಮುಗಿದ ಬೆನ್ನಲ್ಲೇ ಉಗ್ರರ ಅಟ್ಟಹಾಸ ಆರಂಭವಾಗಿದೆ. ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ಇಬ್ಬರು ಯೋಧರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.
ಟೆರಿಟೋರಿಯಲ್ ಆರ್ಮಿ (ಟಿಎ)ಗೆ ಸೇರಿದ ಇಬ್ಬರು ಯೋಧರನ್ನು ಉಗ್ರರು ಅಪಹರಿಸಿದ್ದಾರೆ. ಅನಂತನಾಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಉಗ್ರರಿಂದ ಅಪಹರಣಕ್ಕೆ ಒಳಗಾದ ಇಬ್ಬರು ಸೈನಿಕರ ಪೈಕಿ ಓರ್ವ ಸೈನಿಕ ಉಗ್ರರ ಹಿಡಿತದಿಂದ ಪಾರಾಗಿ ತಪ್ಪಿಸಿಕೊಂಡು ಬಂದಿದ್ದಾನೆ ಎಂಬ ಮಾಹಿತಿ ಇದೆ. ದಟ್ಟ ಅರಣ್ಯ ಪ್ರದೇಶದಲ್ಲಿ ಅಪಹರಣಕ್ಕೊಳಗಾಗಿರುವ ಸೈನಿಕನ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ.
ಕಿಡ್ನಾಪ್ ಆಗಿದ್ದ ಇಬ್ಬರು ಸೈನಿಕರು ಟೆರಿಟೋರಿಯಲ್ ಆರ್ಮಿಗೆ ಸೇರಿದ ಯೋಧರು ಎಂದು ಖಚಿತಪಡಿಸಿದೆ. ಈ ಪೈಕಿ ಓರ್ವ ಯೋಧ ಸುರಕ್ಷಿತವಾಗಿ ಮರಳಿದ್ದಾರೆ. ಸದ್ಯ ಈ ಭಾಗದಲ್ಲಿ ಸೇನಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದು, ನಾಪತ್ತೆಯಾಗಿರುವ ಮತ್ತೋರ್ವ ಯೋಧನ ಹುಡುಕಾಟ ನಡೆಸುತ್ತಿದೆ ಎಂದು ಭದ್ರತಾ ಪಡೆಗಳು ಮಾಧ್ಯಮಗಳಿಗೆ ಹೇಳಿದ್ದಾರೆ.
ಜಮ್ಮು ವಿಭಾಗದಲ್ಲಿ ಭಾರತದ ಗಡಿಯೊಳಗೆ ನುಸುಳಿ ಬರುತ್ತಿದ್ದ ಅಕ್ರಮ ವಲಸಿಗನನ್ನು ಗಡಿ ಭದ್ರತಾ ಪಡೆ ಯೋಧರು ಸೆರೆ ಹಿಡಿದಿದ್ದರು. ಬಂಧಿತ ವ್ಯಕ್ತಿ 31 ವರ್ಷ ವಯಸ್ಸಿನ ಯುವಕನಾಗಿದ್ದು, ಆತ ಪಾಕಿಸ್ತಾನ ಪ್ರಜೆ ಎನ್ನುವುದು ದೃಢವಾಗಿದೆ.
ಬಂಧಿತ ವ್ಯಕ್ತಿಯನ್ನು ಶಾಹಿದ್ ಇಮ್ರಾನ್ ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್‌ಗೋಧಾ ಪಟ್ಟಣದವನು ಎಂದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರವಷ್ಟೇ ಚುನಾವಣೆ ಮುಕ್ತಾಯಗೊಂಡಿದೆ. ಫಾರೂಕ್ ಅಬ್ದುಲ್ಲಾ ನಾಯಕತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಈ ಮಧ್ಯೆ ಈ ಘಟನೆ ನಡೆದಿರುವುದಕ್ಕೆ ಆತಂಕ ವ್ಯಕ್ತವಾಗುತ್ತಿದೆ.