ಬೆಂಗಳೂರು : ಬೆಂಗಳೂರಿಗೆ ಹೋದಾಗಲೆಲ್ಲ ಅಲ್ಲಿನ ಯುವ ಪ್ರತಿಭಾ ಸಮೂಹವನ್ನು ನೋಡಿ ದುಪ್ಪಟ್ಟು ಎನರ್ಜಿಯೊಂದಿಗೆ ವಾಪಸಾಗುತ್ತೇನೆ ಎಂದು ಮರ್ಸಿಡಿಸ್ ಬೆಂಜ್ ಸಿಇಒ ಓಲಾ ಕ್ಯಾಲೆನಿಯಸ್ ಹೇಳಿರುವ ವಿಡಿಯೋ ಬಗ್ಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ನಗರದ ಮೂಲಸೌಕರ್ಯ ಕೊರತೆ, ರಸ್ತೆ ಗುಂಡಿ ಇತ್ಯಾದಿ ವಿಚಾರಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಡಿಕೆ ಶಿವಕುಮಾರ್ ಮರ್ಸಿಡಿಸ್ ಬೆಂಜ್ ಸಿಇಒ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಅಸಾಧಾರಣ ಪ್ರತಿಭೆಯ ಕುರಿತಾದ ಈ ಮಾತುಗಳು ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ಬೆಂಗಳೂರು ಬೆಳೆಯುತ್ತಿರುವುದನ್ನು ಪ್ರತಿಬಿಂಬಿಸುತ್ತವೆ. ಬೆಂಗಳೂರಿಗೆ ಬಂದು ಹೋದಾಗ ಉತ್ಸಾಹ ದುಪ್ಪಟ್ಟಾಗುತ್ತದೆ ಎಂಬ ಮರ್ಸಿಡಿಸ್ ಬೆಂಜ್ ಸಿಇಒ ಓಲಾ ಕ್ಯಾಲೆನಿಯಸ್ ಮಾತುಗಳು ನಮ್ಮ ಜನರ ಪ್ರತಿಭೆಗೆ ಹೆಮ್ಮೆಯ ಮನ್ನಣೆಯಾಗಿದೆ ಎಂದು ಎಕ್ಸ್ ಸಂದೇಶದಲ್ಲಿ ಡಿಕೆ ಶಿವಕುಮಾರ್ ಬರೆದುಕೊಂಡಿದ್ದಾರೆ.
ಮರ್ಸಿಡಿಸ್ ಬೆಂಜ್ ಸಿಇಒ ಓಲಾ ಕ್ಯಾಲೆನಿಯಸ್ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಬೆಂಗಳೂರಿಗೆ ಹೋಗಿ ಬಂದಾಗಲೆಲ್ಲ ನಾನು ದುಪ್ಪಟ್ಟು ಉತ್ಸಾಹದಲ್ಲಿರುತ್ತೇನೆ. ಬೆಂಗಳೂರಿನಲ್ಲಿರುವ ಸಾಫ್ಟ್‌ವೇರ್ ಪ್ರತಿಭಾ ಸಮೂಹವು ಬಹಳ ಅದ್ಭುತವಾಗಿದೆ. ಅತ್ಯುತ್ತಮವಾಗಿ ಜರ್ಮನ್ ಭಾಷೆ ಮಾತನಾಡುವವರನ್ನು ಬೆಂಗಳೂರಿನಲ್ಲಿ ನೋಡಿದ್ದೇನೆ. ಅಂಥವರ ಬಳಿ, ನೀವು ಜರ್ಮನಿಯಲ್ಲಿ ಎಲ್ಲಿ ಓದಿದ್ದೀರಿ ಎಂದು ಕೇಳಿದರೆ, ‘ಜರ್ಮನಿಗೆ ಎಂದೂ ಹೋಗಿಯೇ ಇಲ್ಲ ಎನ್ನುತ್ತಾರೆ’. ಇಂಥ ಸ್ಫೂರ್ತಿ, ಪ್ರತಿಭೆಗಳೇ ನಮಗೆ ಬೇಕು. ಇಂಥವರು ಇರುವ ಕಡೆಗೆ ನಾವು ಹೋಗುತ್ತೇವೆ ಎಂದು ಓಲಾ ಕ್ಯಾಲೆನಿಯಸ್ ಹೇಳಿದ್ದಾರೆ.
ಇದನ್ನೂ ಓದಿ : ಮಹಿಳಾ ಕ್ರಿಕೆಟ್ ರ‍್ಯಾಂಕಿಂಗ್ : ಮಂಧಾನಾ ಅಧಿಪತ್ಯ, ಆಸೀಸ್ ಆಲ್‌ರೌಂಡರ್‌ಗಳ ಪ್ರಾಬಲ್ಯ



















