ಹುಬ್ಬಳ್ಳಿ : ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಬಡ ಮಕ್ಕಳ ಔಷಧಿ ರಸ್ತೆ ಮತ್ತು ತಿಪ್ಪೆ ಪಾಲಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಔಷಧಿಗಳು ಸಿಗುತ್ತಿಲ್ಲ. ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ವಿತರಣೆಯಾಗಬೇಕಿದ್ದ ಔಷಧಿಗಳು ಕೂಡ ರಸ್ತೆ ಪಾಲಾಗುತ್ತಿವೆ. ಇದನ್ನು ಕಂಡು ಸಾರ್ವಜನಿಕರು ಆರೋಗ್ಯ ಸಿಬ್ಬಂದಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಹುಬ್ಬಳ್ಳಿಯ ಗೊಬ್ಬುರು ಬೈಪಾಸ್‌ನಲ್ಲಿ ಈ ಘಟನೆ ನಡೆದಿದೆ. ಇನ್ನೂ ಎರಡು ವರ್ಷಗಳ ಅವಧಿಗೆ ಇರುವ ಔಷಧಿಗಳನ್ನು ಸಿಬ್ಬಂದಿ ತಿಪ್ಪೆಗೆ ಎಸೆದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.
ಬಡ ಮಕ್ಕಳಿಗೆ ವಿತರಿಸಬೇಕಿದ್ದ ಅತೀ ಅವಶ್ಯಕ ಔಷಧಿಗಳನ್ನು ಸಿಬ್ಬಂದಿ ರಸ್ತೆಗೆ ಎಸೆದಿದ್ದಾರೆ. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಬೇಕಾದ ಅತೀ ಅವಶ್ಯಕ ಔಷಧಿಗಳನ್ನು ಬಳಕೆ ಮಾಡಿಕೊಳ್ಳದೆ ಈ ರೀತಿ ಮಾಡಿದ್ದಾರೆ. ಐರನ್ ಮತ್ತು ಸಿರಪ್ ನ ಹೊಸ ಹೊಸ ಬಾಟಲಿಗಳು ಬಳಕೆಯಾಗದೆ ತಿಪ್ಪೆ ಪಾಲಾಗಿವೆ. ಹೊಸ ಬಾಕ್ಸ್ ಗಳನ್ನು ಪ್ಯಾಕಿಂಗ್ ಸಮೇತ ಸಿಬ್ಬಂದಿ ತಿಪ್ಪೆಗೆ ಎಸೆದಿದ್ದಾರೆ.
ತಿಪ್ಪೆಗೆ ಎಸೆದಿರುವ ಔಷಧಿಗಳ ಅವಧಿ ಇನ್ನೂ ಎರಡು ವರ್ಷ ಇವೆ. 2027ರ ಎಪ್ರಿಲ್ ತಿಂಗಳಲ್ಲಿ ಔಷಧಿಯ ಅವಧಿ ಮುಗಿಯಲಿದೆ. ಆದರೆ, ಯಾವುದೇ ಬಳಕೆ ಮಾಡದೆ ಸಿಬ್ಬಂದಿಗಳು ರಸ್ತೆಗೆ ಎಸೆದಿದ್ದಾರೆ. ಕೆಲವು ಔಷಧಿಗಳನ್ನು ರಸ್ತೆಗೆ ಎಸೆದಿದ್ದರೆ, ಇನ್ನೂ ಕೆಲವು ಔಷಧಿಗಳನ್ನು ಬೆಂಕಿ ಹಚ್ಚಿ ದಹಿಸಿದ್ದಾರೆ. ಮಾಹಿತಿ ತಿಳಿದು ತಾಲೂಕು ಆರೋಗ್ಯಾಧಿಕಾರಿ ಹುಲುಗೇಶ್ ಮತ್ತು ಔಷಧ ನಿಯಂತ್ರಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ರಸ್ತೆ ಮೇಲೆ ಚೆಲ್ಲಿರುವ ಔಷಧಿಗಳನ್ನು ವಶಕ್ಕೆ ಪಡೆದಿರುವ ಹಿರಿಯ ಅಧಿಕಾರಿಗಳು, ತಪ್ಪಿತಸ್ಥರ ಪತ್ತೆಗಾಗಿ ಮುಂದಾಗಿದ್ದಾರೆ.
ಇದನ್ನೂ ಓದಿ : ಮಾಧ್ಯಮ ಪ್ರತಿನಿಧಿಗಳಿಗೆ ವಿಧಾನಸೌಧದಲ್ಲಿ ನಿರ್ಬಂಧ ಖಂಡಿಸಿ ಧರಣಿ



















