ಹೈದರಾಬಾದ್: ಹೈದರಾಬಾದ್‌ನ ತಪ್ಪಚಬುಟ್ರಾ ಪ್ರದೇಶದಲ್ಲಿ ದೇವಸ್ಥಾನವೊಂದರೊಳಗೆ ಮಾಂಸ ಪತ್ತೆಯಾಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಹನುಮಾನ್ ದೇವಾಲಯದ ಸಂಕೀರ್ಣದೊಳಗಿರುವ ಶಿವ ದೇಗುಲದಲ್ಲಿ ಈ ಘಟನೆ ನಡೆದಿದ್ದು, ಮಾಂಸದ ತುಂಡುಗಳು ಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರೆಲ್ಲ ಜಮಾಯಿಸಿ, ಪ್ರತಿಭಟನೆಯನ್ನೂ ನಡೆಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸುಮಾರು 250 ಗ್ರಾಂನಷ್ಟು ಮಾಂಸವನ್ನು ವಶಕ್ಕೆ ಪಡೆದು, ಪರಿಶೀಲಿಸಿದಾಗ ಅವು ಮಟನ್ ಪೀಸ್‌ಗಳೆಂದು ದೃಢಪಟ್ಟಿವೆ. ಕೂಡಲೇ ಪೊಲೀಸರ 4 ತಂಡಗಳು ಸುತ್ತಮುತ್ತಲಿನ ಎಲ್ಲ ಸಿಸಿಟಿವಿ ಫೂಟೇಜ್‌ಗಳನ್ನು ಸಂಗ್ರಹಿಸಿ, ತನಿಖೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೂ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸುವ ಕೆಲಸ ಮಾಡಿದ್ದಾರೆ. ಬಳಿಕ ದೇಗುಲದ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ದೇಗುಲದೊಳಗೆ ಮಟನ್ ಪೀಸ್ ತಂದಿಟ್ಟ ಆರೋಪಿ ಬೇರಾರೂ ಅಲ್ಲ, “ಬೆಕ್ಕು” ಎಂಬುದು ತಿಳಿದುಬಂದಿದೆ!
ಹೌದು, ಬೆಕ್ಕೊಂದು ಮಟನ್ ಪೀಸನ್ನು ಕಚ್ಚಿಕೊಂಡು ದೇಗುಲದೊಳಕ್ಕೆ ಬರುವ ಸ್ಪಷ್ಟ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಾಂಸವನ್ನು ದೇಗುಲದೊಳಕ್ಕೆ ತಂದಿದ್ದಲ್ಲದೇ, ಅದನ್ನು ಬೆಕ್ಕು ಶಿವಲಿಂಗದ ಹಿಂಭಾಗದಲ್ಲಿ ಅಡಗಿಸಿಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ, ಈ ಘಟನೆ ಕುರಿತು ವದಂತಿ ಹಬ್ಬಿಸದಂತೆಯೂ ನಾಗರಿಕರಿಗೆ ಸೂಚಿಸಿದ್ದಾರೆ.
ಇದಕ್ಕೂ ಮುನ್ನ ದೇಗುಲ ಸಮಿತಿಯ ಸದಸ್ಯರೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, ಯಾರೋ ದೇಗುಲದೊಳಕ್ಕೆ ಮಾಂಸವನ್ನು ಬಿಸಾಕಿದ್ದು, ಅದು ಶಿವಲಿಂಗದ ಹಿಂದೆ ಬಿದ್ದಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾ(ಬಿಜೆವೈಎಂ) ಕಾರ್ಯಕರ್ತರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಪ್ರತಿಭಟನೆ ನಡೆಸಿದ್ದರು.