ಬಳ್ಳಾರಿ : ಬಳ್ಳಾರಿಯ ನಗರ ವ್ಯಾಪ್ತಿಯ ನಾಗಲಕೇರಿ ಪ್ರದೇಶದಲ್ಲಿರುವ ಆಂಜನೇಯ ದೇಗುಲದ ಆವರಣದಲ್ಲಿ ಮಾಂಸದ ಮೂಳೆಗಳು ಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಘಟನೆ ಕುರಿತು ಕಿಡಿಗೇಡಿಗಳ ಕೃತ್ಯವೋ ಅಥವಾ ನಾಯಿಗಳು ಮಾಂಸದ ಅವಶೇಷಗಳನ್ನು ತಂದು ಎಸೆದಿರುವುದೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಆಂಜನೇಯ ದೇವಸ್ಥಾನದ ಆವರಣದ ಹಿಂಭಾಗದಲ್ಲೇ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಇರುವುದಾಗಿ ತಿಳಿದುಬಂದಿದೆ. ವೆಂಕಟೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಗರುಡಸ್ತಂಭದ ಮುಂದೆ ಪ್ಲಾಸ್ಟಿಕ್ ಕವರ್‌ನಲ್ಲಿ ಮಾಂಸದ ಮೂಳೆಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.
ಘಟನೆಯನ್ನು ಗಮನಿಸಿದ ಅರ್ಚಕರು ತಕ್ಷಣ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಕೌಲಬಜಾರ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಂಸದ ಮೂಳೆಗಳು ಹೇಗೆ ದೇವಸ್ಥಾನ ಆವರಣಕ್ಕೆ ಬಂದವು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಸೇರಿದಂತೆ ಎಲ್ಲಾ ಆಯಾಮಗಳಿಂದ ವಿಚಾರಣೆ ಮುಂದುವರಿದಿದೆ.
ಸ್ಥಳೀಯರಲ್ಲಿ ಆತಂಕ ಮೂಡಿರುವ ಹಿನ್ನೆಲೆಯಲ್ಲಿ, ಪೊಲೀಸರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ಯಾವುದೇ ರೀತಿಯ ಊಹಾಪೋಹಗಳಿಗೆ ಅವಕಾಶ ನೀಡಬಾರದೆಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸೈಬರ್ ವಂಚಕರಿಗೆ CID ಶಾಕ್..! ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್ ಪತ್ತೆ ; 13 ಮಾಸ್ಟರ್‌ಮೈಂಡ್‌ಗಳು ಅರೆಸ್ಟ್



















