ಕಲಬುರಗಿ : ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಶಾಲಾ-ಕಾಲೇಜು ಮೈದಾನಗಳು, ಸಾರ್ವಜನಿಕ ಪಾರ್ಕ್, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ಅವಕಾಶ ನೀಡಬಾರದು. ಈ ಸಂಬಂಧ, ಕಾನೂನು ರೂಪಿಸಬೇಕು ಅಂತ ಮನವಿ ಸಲ್ಲಿಸಿದ್ದಾರೆ. ಆದ್ರೆ ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಈಗ ಕಾಂಗ್ರೆಸ್ ಶಾಸಕರೇ ಕೌಂಟರ್ ಕೊಡುವ ಕೆಲಸ ಮಾಡಿದ್ದಾರೆ.
ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಅನುದಾನಿತ ಶಾಲೆಯಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆದಿದೆ. ಅಫಜಲಪುರ್ ಪಟ್ಟಣದ ಬಸವೇಶ್ವರ ವೃತದ ಬಳಿಯಿರುವ ಶಾಸಕರ ಮಹಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ನಿನ್ನೆ (ಅ.12) ಸಂಜೆ ಆಕರ್ಷಕ ಆರ್‌ಎಸ್‌ಎಸ್ ಪಥಸಂಚಲನ ನಡೆಸಲಾಗಿದೆ. ಪಥಸಂಚಲನದಲ್ಲಿ ನೂರಾರು ಆರ್‌ಎಸ್‌ಎಸ್ ಕಾರ್ಯಕರ್ತರು ಭಾಗಿಯಾಗಿದ್ದು, ಬಳಿಕ ಶಾಲಾ ಆವರಣದಲ್ಲಿಯೇ ಬೌದ್ಧಿಕ ಕಾರ್ಯಕ್ರಮ ಕೂಡ ನಡೆದಿದೆ. ಇದು ವಿಪಕ್ಷಗಳ ಬಾಯಿಗೆ ಆಹಾರವಾಗಿದೆ.
ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ, ನಿಗಾ ಇಡಲು ಭಾನುವಾರ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಪ್ರಿಯಾಂಕ್ ಖರ್ಗೆ ಪತ್ರದ ಸಾಧಕ ಬಾಧಕಗಳ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಿ ನಿರ್ಣಯ ಕೈಗೊಳ್ಳಲಾಗಿದೆ.