ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಂಬೈನ ಮುಂದಿನ ಮೇಯರ್ ಆಯ್ಕೆಯ ಕುರಿತು ರಾಜಕೀಯ ವಾಕ್ಸಮರ ತಾರಕಕ್ಕೇರಿದೆ. “ದೇವರ ಇಚ್ಛೆಯಿದ್ದರೆ ನಮ್ಮ ಪಕ್ಷದವರೇ ಮೇಯರ್ ಆಗಲಿದ್ದಾರೆ” ಎಂಬ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವ್ಯಂಗ್ಯವಾಗಿ ಪ್ರತ್ಯುತ್ತರ ನೀಡಿದ್ದಾರೆ. “ದೇವರು ಎಂದರೆ ಅದು ಭಗವಂತನೋ ಅಥವಾ ನನ್ನ ಹೆಸರೋ?” ಎಂದು ಪ್ರಶ್ನಿಸಿರುವ ಅವರು, ಮುಂಬೈನ ಮುಂದಿನ ಮೇಯರ್ ಮಹಾಯುತಿ ಮೈತ್ರಿಕೂಟದವರೇ ಆಗುವುದು ದೈವೇಚ್ಛೆಯಾಗಿದೆ. ಜೊತೆಗೆ ಅದನ್ನು ನಿರ್ಧರಿಸುವವರು ನಾವೇ ಆಗಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಫಲಿತಾಂಶದ ನಂತರ ಮೊದಲ ಬಾರಿಗೆ ಶನಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಉದ್ಧವ್ ಠಾಕ್ರೆ, ಮುಂಬೈನಲ್ಲಿ ಶಿವಸೇನೆ (ಯುಬಿಟಿ) ಮೇಯರ್ ಆಗುವುದು ತಮ್ಮ ಕನಸಾಗಿದೆ ಮತ್ತು ಅದಕ್ಕೆ ದೇವರ ಆಶೀರ್ವಾದವಿರುತ್ತದೆ ಎಂದು ಹೇಳಿದ್ದರು. ಇಂದು ಇದಕ್ಕೆ ಲೇವಡಿ ಮಾಡಿದ ಫಡ್ನವೀಸ್, “ನನ್ನನ್ನೂ ಪ್ರೀತಿಯಿಂದ ‘ದೇವ ಭಾವು’ ಎಂದು ಕರೆಯುತ್ತಾರೆ. ಮೇಯರ್ ಯಾರು, ಎಷ್ಟು ವರ್ಷಕ್ಕೆ ಮತ್ತು ಎಲ್ಲಿ ನಿರ್ಧರಿಸಬೇಕು ಎಂಬುದನ್ನು ನಾನು, ಏಕನಾಥ್ ಶಿಂಧೆ ಮತ್ತು ನಮ್ಮ ಪಕ್ಷದ ನಾಯಕರು ಸೇರಿ ತೀರ್ಮಾನಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಬಿಎಂಸಿ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರೂ ಉದ್ಧವ್ ಠಾಕ್ರೆ ಅವರು ಬಿಜೆಪಿ ಮತ್ತು ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. “ಬಿಜೆಪಿಯು ಮುಂಬೈ ಮೇಲೆ ದ್ರೋಹ ಎಸಗುವ ಮೂಲಕ ಜಯಗಳಿಸಿದೆ. ಮರಾಠಿ ಮನುಷ್ಯರು ಈ ಪಾಪವನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಕಿಡಿಕಾರಿದ್ದಾರೆ. ಮತದಾನದ ವೇಳೆ ಅಕ್ರಮಗಳು ನಡೆದಿವೆ ಮತ್ತು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯ ಶಕ್ತಿ ಕೇವಲ ಕಾಗದದ ಮೇಲಿದೆಯೇ ಹೊರತು ಬೀದಿಯಲ್ಲಲ್ಲ ಎಂದಿದ್ದಾರೆ.
ಇತ್ತೀಚಿನ ಬಿಎಂಸಿ ಚುನಾವಣಾ ಫಲಿತಾಂಶದ ಪ್ರಕಾರ, 227 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 114ರ ಸರಳ ಬಹುಮತದ ಗಡಿಯನ್ನು ದಾಟಿದೆ. ಬಿಜೆಪಿ 89 ಸ್ಥಾನಗಳನ್ನು ಗೆದ್ದಿದ್ದರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ 29 ಸ್ಥಾನಗಳನ್ನು ಗಳಿಸಿದ್ದು, ಒಟ್ಟು ಮೈತ್ರಿಕೂಟದ ಬಲ 118ಕ್ಕೆ ಏರಿಕೆಯಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) 65 ಸ್ಥಾನಗಳೊಂದಿಗೆ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಮೂರು ದಶಕಗಳಿಂದ ಬಿಎಂಸಿಯ ಮೇಲೆ ಹೊಂದಿದ್ದ ಠಾಕ್ರೆ ಕುಟುಂಬದ ಪ್ರಾಬಲ್ಯಕ್ಕೆ ಈ ಚುನಾವಣೆಯು ದೊಡ್ಡ ಪೆಟ್ಟು ನೀಡಿದೆ.
ಇದನ್ನೂ ಓದಿ : ಮಣಿಕರ್ಣಿಕಾ ಘಾಟ್ ವಿವಾದ | AI ಚಿತ್ರಗಳ ಮೂಲಕ ಸುಳ್ಳು ಸುದ್ದಿ ಹರಡಿದವರ ವಿರುದ್ಧ 8 ಎಫ್‌ಐಆರ್ ದಾಖಲು



















