ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಟಿರಾ ಕಣಿವೆಯಲ್ಲಿ ನಡೆದ ಭೀಕರ ಸ್ಫೋಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದಾರೆ. ಇದು ಪಾಕಿಸ್ತಾನ ವಾಯುಪಡೆಯೇ ನಡೆಸಿದ ವಾಯುದಾಳಿ ಎಂದು ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ಆರೋಪಿಸಿದರೆ, ಪಾಕಿಸ್ತಾನ ಸೇನೆಯು ಇದನ್ನು ನಿರಾಕರಿಸಿದ್ದು, ಉಗ್ರರ ಮದ್ದುಗುಂಡುಗಳ ಸಂಗ್ರಹದಲ್ಲಿ ನಡೆದ ಆಕಸ್ಮಿಕ ಸ್ಫೋಟವೇ ದುರಂತಕ್ಕೆ ಕಾರಣ ಎಂದು ಹೇಳಿದೆ.
ನಡೆದಿದ್ದೇನು?
ಭಾನುವಾರ ಮುಂಜಾನೆ ಸುಮಾರು 2 ಗಂಟೆಗೆ, ಟಿರಾ ಕಣಿವೆಯ ಮಾತ್ರೆ ದಾರಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಚೀನಾ ನಿರ್ಮಿತ ಜೆಎಫ್-17 ಥಂಡರ್ ಜೆಟ್‌ಗಳನ್ನು ಬಳಸಿ, ಕನಿಷ್ಠ ಎಂಟು ಎಲ್ಎಸ್-6 ಪ್ರೆಸಿಷನ್ ಗ್ಲೈಡ್ ಬಾಂಬ್‌ಗಳನ್ನು ನಾಗರಿಕ ವಸತಿ ಪ್ರದೇಶಗಳ ಮೇಲೆ ಎಸೆಯಲಾಗಿದೆ. ಈ ದಾಳಿಯಲ್ಲಿ ಯಾವುದೇ ಉಗ್ರರು ಹತರಾದ ಬಗ್ಗೆ ದೃಢಪಟ್ಟಿಲ್ಲ.
ನಿದ್ರಿಸುತ್ತಿದ್ದ ಕುಟುಂಬಗಳ ಮೇಲೆ ಬಾಂಬ್‌ಗಳು ಬಿದ್ದಿದ್ದರಿಂದ ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ. “ಬೆಳಗಾಗುವಷ್ಟರಲ್ಲಿ ಗ್ರಾಮವು ಶವಗಳಿಂದ ತುಂಬಿಹೋಗಿತ್ತು” ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಸ್ಥಳೀಯರ ಆಕ್ರೋಶ, ಸೇನೆಯ ನಿರಾಕರಣೆ
ಪಾಕಿಸ್ತಾನ ಸೇನೆಯು ಈ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. “ಖವಾರಿಜ್ ಉಗ್ರರು ಅಡಗಿಸಿಟ್ಟಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳು ಮನೆಯೊಂದರಲ್ಲಿ ಸ್ಫೋಟಗೊಂಡು, ಅಕ್ಕಪಕ್ಕದ ಮನೆಗಳು ಕುಸಿದು ನಾಗರಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 12-14 ಉಗ್ರರು ಹಾಗೂ ‘ಮಾನವ ಗುರಾಣಿ’ಗಳಾಗಿ ಬಳಸಲ್ಪಟ್ಟ 8-10 ನಾಗರಿಕರು ಮೃತಪಟ್ಟಿದ್ದಾರೆ” ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.
ಆದರೆ, ಸೇನೆಯ ಈ ವಾದವನ್ನು ಗುಪ್ತಚರ ಮೂಲಗಳು ಮತ್ತು ಸ್ಥಳೀಯರು ಒಪ್ಪಿಲ್ಲ. ನಿಖರವಾದ ಬಾಂಬ್‌ಗಳ ಬಳಕೆಯು ಇದು ಉದ್ದೇಶಪೂರ್ವಕ ದಾಳಿಯೇ ಹೊರತು ಆಕಸ್ಮಿಕವಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದು ಭಯೋತ್ಪಾದನಾ ನಿಗ್ರಹದ ಹೆಸರಿನಲ್ಲಿ ಮುಗ್ಧರನ್ನು ಹತ್ಯೆಗೈಯುವ ಇಸ್ಲಾಮಾಬಾದ್‌ನ ತಂತ್ರ ಎಂದು ಆರೋಪಿಸಲಾಗಿದೆ.
ಭಾರೀ ಪ್ರತಿಭಟನೆ
ಈ ದಾಳಿ ಖಂಡಿಸಿ ಸ್ಥಳೀಯ ಅಕಾಖೇಲ್ ಬುಡಕಟ್ಟು ಜನಾಂಗವು ‘ಜಿರ್ಗಾ’ (ಬುಡಕಟ್ಟು ಸಮಿತಿ) ಸಭೆ ನಡೆಸಿದೆ. ಮೃತಪಟ್ಟ ಮಹಿಳೆಯರ ಅಂತ್ಯಸಂಸ್ಕಾರ ನಡೆಸಿ, ಪುರುಷರು ಮತ್ತು ಮಕ್ಕಳ ಶವಗಳನ್ನು ಕಾರ್ಪ್ಸ್ ಕಮಾಂಡರ್ ನಿವಾಸದ ಮುಂದೆ ಇಟ್ಟು ಪ್ರತಿಭಟಿಸಲು ನಿರ್ಧರಿಸಲಾಗಿದೆ. ಈಗಾಗಲೇ ಖೈಬರ್ ಚೌಕ್‌ನಲ್ಲಿ ಪ್ರತಿಭಟನೆ ಆರಂಭವಾಗಿದ್ದು, “ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಸರ್ಕಾರ ಮುಗ್ಧರನ್ನು ಕೊಲ್ಲುತ್ತಿದೆ” ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ತೂನ್ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ‘ಯುದ್ಧಾಪರಾಧ’ ಮತ್ತು ‘ಜನಾಂಗೀಯ ಹತ್ಯೆ’ ಎಂದು ಕರೆದಿದ್ದಾರೆ.