ಹತ್ರಾಸ್ (ಉತ್ತರ ಪ್ರದೇಶ): ತಮ್ಮ ಅಕ್ರಮ ಸಂಬಂಧವನ್ನು ನೋಡಿದ ಆರು ವರ್ಷದ ಬಾಲಕಿಯನ್ನು ವಿವಾಹಿತ ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ವಯಸ್ಕ ಪ್ರಿಯಕರನೊಂದಿಗೆ ಸೇರಿ ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಸಿಕಂದ್ರಾ ರಾವ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದು ಈ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿದೆ. ಕಳೆದ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭವೊಂದರಿಂದ ಉರ್ವಿ ಎಂಬ ಬಾಲಕಿ ನಾಪತ್ತೆಯಾಗಿದ್ದಳು. ಮಧ್ಯಾಹ್ನ 1:30ರ ಸುಮಾರಿಗೆ, ಆಕೆಯ ಮೃತದೇಹವು ಗೋಣಿಚೀಲದಲ್ಲಿ ತುಂಬಿ, ಕುತ್ತಿಗೆಗೆ ಬಟ್ಟೆಯಿಂದ ಬಿಗಿದ ಸ್ಥಿತಿಯಲ್ಲಿ ಬಾವಿಯೊಂದರಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿತ್ತು.
ಕೊಲೆಗೆ ಕಾರಣವೇನು?
ಘಟನೆಯ ಬಗ್ಗೆ ತನಿಖೆ ನಡೆಸಿದ ಬಳಿಕ ಸತ್ಯವನ್ನು ಕಂಡುಕೊಂಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. “ಆರೋಪಿ ಮಹಿಳೆಯು ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಆ ಮಹಿಳೆ ಮತ್ತು ಬಾಲಕನು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಸಂದರ್ಭದಲ್ಲೇ ಅಚಾನಕ್ಕಾಗಿ ಆ ದೃಶ್ಯವನ್ನು ಈ 6 ವರ್ಷದ ಬಾಲಕಿ ನೋಡಿದ್ದಾಳೆ. ಜೊತೆಗೆ, ಈ ವಿಷಯವನ್ನು ತನ್ನ ತಂದೆಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಆಕೆ ಅಲ್ಲಿಂದ ಹೊರಡುತ್ತಿದ್ದಂತೆಯೇ, ಇಬ್ಬರೂ ಸೇರಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ” ಎಂದು ಅಶೋಕ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಸುಮಾರು 30 ವರ್ಷದ ಆರೋಪಿ ಮಹಿಳೆ, 17 ವರ್ಷದ ಬಾಲಕನೊಂದಿಗೆ ಕಳೆದ ಮೂರು ತಿಂಗಳಿಂದ ಸಂಬಂಧ ಹೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆ ನಡೆದ ದಿನ, ಆಕೆಯ ಪತಿ ಮತ್ತು ಅತ್ತೆ ಮನೆಯಲ್ಲಿ ಇಲ್ಲದಿದ್ದಾಗ, ಆಕೆ ಬಾಲಕನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಬಾಲಕಿ ಅವರನ್ನು ನೋಡಿದ್ದು, ಎಚ್ಚರಿಕೆ ನೀಡಿದರೂ ತನ್ನ ತಂದೆಗೆ ಹೇಳುವುದಾಗಿ ತಿಳಿಸಿದ್ದಾಳೆ.
ಇದರಿಂದ ಭಯಗೊಂಡ ಇಬ್ಬರೂ ಆಕೆಯನ್ನು ಕೊಂದು, ದೇಹವನ್ನು ಚೀಲದಲ್ಲಿ ತುಂಬಿ ಪಾಳು ಬಾವಿಗೆ ಎಸೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಂಧನದ ಸಮಯದಲ್ಲಿ ಮಹಿಳೆಯ ಕೈಯಲ್ಲಿ ಕಚ್ಚಿದ ಗುರುತುಗಳಿದ್ದವು. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬಾಲಕಿ ಕಚ್ಚಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯನ್ನು ಬಂಧಿಸಲಾಗಿದ್ದು, ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.