ನವದೆಹಲಿ: ಜೂನ್ ತಿಂಗಳಲ್ಲಿ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ (IND vs ENG) ಇಂಗ್ಲೆಂಡ್ ತಂಡದ ವೇಗದ ಬೌಲರ್ ಮಾರ್ಕ್ ವುಡ್ (Mark Wood) ಹೊರಬೀಳುವ ಸಾಧ್ಯತೆ ಇದೆ. ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಮಾರ್ಕ್ ವುಡ್ ಅವರು ಮುಂದಿನ ನಾಲ್ಕು ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿರಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಾರ್ಚ್ 13ರಂದು ತಿಳಿಸಿದೆ. ಮಾರ್ಕ್ ವುಡ್ ಇತ್ತೀಚೆಗೆ ಮುಗಿದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಆಡಿದ್ದರು.
ಮಾರ್ಕ್ ವುಡ್ ದೀರ್ಘಕಾಲದಿಂದ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಫೆಬ್ರವರಿ 26ರಂದು ಅಫ್ಘಾನಿಸ್ತಾನ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಮಾರ್ಕ್ ವುಡ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಇದರ ಪರಿಣಾಮವಾಗಿ, ಅವರು ಕೇವಲ 8 ಓವರ್‌ಗಳನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಗಿತ್ತು. ಮಾರ್ಚ್ 1ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಆಡಲು ಅವರಿಗೆ ಸಾಧ್ಯವಾಗಿರಲಿಲ್ಲ.
ಜೂನ್ 20ರಿಂದ ಆಗಸ್ಟ್ 4ರ ವರೆಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಸ್‌ಶಿಪ್ ಪಯಣವನ್ನು ಆರಂಭಿಸಲಿವೆ. ಇಂಗ್ಲೆಂಡ್‌ನ ಬೇಸಿಗೆಯ ಆರಂಭಿಕ ಸರಣಿಯನ್ನು ಮಾರ್ಕ್ ವುಡ್ ಕಳೆದುಕೊಳ್ಳಲಿದ್ದಾರೆ ಎಂದು ಇಸಿಬಿ ತಿಳಿಸಿದೆ. ಆದರೆ, ಜುಲೈ ಅಂತ್ಯದ ವೇಳೆಗೆ ಅವರು ಮತ್ತೆ ಲಭ್ಯರಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಗಾಯದ ಕಾರಣದಿಂದಾಗಿ ಅವರು ಪ್ರಮುಖ ಸರಣಿಯನ್ನು ಕಳೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊಣಕೈ ಗಾಯದಿಂದಾಗಿ ಅವರು ಕೆಲವು ಸರಣಿಗಳನ್ನು ಕಳೆದುಕೊಂಡಿದ್ದರು.
ಮಾರ್ಕ್ ವುಡ್ ಹೇಳಿದ್ದೇನು?
“ಕಳೆದ ವರ್ಷದ ಆರಂಭದಿಂದ ಎಲ್ಲಾ ಸ್ವರೂಪಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ ನಂತರ ನಾನು ಇಷ್ಟು ದಿನ ಹೊರಗುಳಿದಿರುವುದಕ್ಕೆ ಬೇಸರ ತಂದಿದೆ. ಆದರೆ ಈಗ ನನ್ನ ಮೊಣಕಾಲು ಗಾಯವನ್ನು ಸರಿಪಡಿಸಿಕೊಂಡ ಬಳಿಕ ನಾನು ಮತ್ತೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಮರಳುತ್ತೇನೆಂಬ ವಿಶ್ವಾಸ ನನಗಿದೆ,” ಎಂದು ಮಾರ್ಕ್ ವುಡ್ ಇಸಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ನನಗೆ ಬೆಂಬಲ ನೀಡಿದ ಶಸ್ತ್ರಚಿಕಿತ್ಸಕರು, ವೈದ್ಯರು, ಸಿಬ್ಬಂದಿ, ನನ್ನ ಇಂಗ್ಲೆಂಡ್ ತಂಡದ ಸದಸ್ಯರು ಮತ್ತು ತರಬೇತುದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅನುಮಾನವಿಲ್ಲದೆ ಅಭಿಮಾನಿಗಳಿಗೂ ಕೂಡ ಧನ್ಯವಾದ ಹೇಳುತ್ತೇನೆ. 2025ರಲ್ಲಿನ ನಮ್ಮ ಪಾಲಿನ ದೊಡ್ಡ ಸರಣಿಗಳಲ್ಲಿ ತಂಡಕ್ಕೆ ಕೊಡುಗೆ ನೀಡಲು ನಾನು ಮತ್ತೆ ಬರಲು ಎದುರು ನೋಡುತ್ತಿದ್ದೇನೆ,” ಎಂದು ಮಾರ್ಕ್ ವುಡ್ ಹೇಳಿದ್ದಾರೆ.
ಇಂಗ್ಲೆಂಡ್‌ಗೆ ಭಾರಿ ಹಿನ್ನಡೆ
ಮಾರ್ಕ್ ವುಡ್ ಅವರು 2021-22ರ ಸಾಲಿನಲ್ಲಿ ಆಡಿದ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡದ ವಿರುದ್ಧ ಐದು ವಿಕೆಟ್‌ಗಳನ್ನು ಪಡೆದಿದ್ದರು. 2024ರ ಭಾರತದ ಪ್ರವಾಸದ ಟೆಸ್ಟ್ ಸರಣಿಯ ರಾಜ್ಕೋಟ್ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಈಗಾಗಲೇ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈಗ ಭಾರತದ ಟೆಸ್ಟ್ ಸರಣಿಯಿಂದ ಮಾರ್ಕ್ ವುಡ್ ಅಲಭ್ಯರಾದರೆ, ಇಂಗ್ಲೆಂಡ್ ತಂಡಕ್ಕೆ ಭಾರಿ ಹಿನ್ನಡೆಯಾಗಲಿದೆ.