ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ರಾಜ್ಯದ ವಿವಿಧೆಡೆ ಭರ್ಜರಿ ಮಳೆ ಸುರಿದಿದೆ. ಜೂನ್ 11 ರಿಂದ ಮಳೆ ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆಯ ಮಾತು ದಿಟವಾಗಿದೆ. ಮಳೆಯಿಂದ ರಾಜ್ಯದ ಕೆಲ ಕಡೆ ಅವಾಂತರ ಸೃಷ್ಟಿಯಾಗಿದ್ದರೆ, ವರ್ಷಧಾರೆಯಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬಡಾವಣೆಗಳಿಗೆ ನುಗ್ಗಿದ ನೀರು..
ಉತ್ತಮ ಮಳೆಯಿಂದ ಬಿತ್ತನೆ ಮಾಡಿದ್ದ ರೈತರು ಫುಲ್ ಖುಷ್ ಆಗಿದ್ದು, ವರುಣನಿಗೆ ಮನತುಂಬಿ ಧನ್ಯವಾದ ಅರ್ಪಿಸಿದ್ದಾರೆ. ಧಾರವಾಡದಲ್ಲಿ ಬಿದ್ದ ಮಳೆ ನೀರು, ಕೆಲವು ಬಡಾವಣೆಗಳಿಗೆ ನುಗ್ಗಿತ್ತು. ಹಾವೇರಿಪೇಟ, ಕೆಎಂಎಫ್, ಬಿಆರ್ ಟಿಎಸ್ ಕಾರಿಡಾರ್ ಬಡಾವಣೆಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದ್ದಾರೆ. ರಸ್ತೆಗಳು ಹೊಳೆಯಂತಾಗಿದ್ದರಿಂದ ವಾಹನ ಕೆಲ ಸವಾರರು ಪೇಚಾಟಕ್ಕೆ ಸಿಲುಕಿದ್ದರು. ಇತ್ತ ಹೆಬ್ಬಳ್ಳಿಯಲ್ಲಿ ವರುಣ ಆರ್ಭಟಿಸಿದ್ದು, ಹೊಲಗದ್ದೆಗಳು ಕೆರೆಯಂತಾಗಿವೆ.
ದೇಗುಲಕ್ಕೆ ಜಲ ದಿಗ್ಬಂಧನ..
ಭಾರಿ ವರ್ಷಧಾರೆಯಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ದೇಗುಲ ಮುಳುಗಡೆಯಾಗಿತ್ತು. ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಮಳೆ ಜಲ ದಿಗ್ಬಂಧನ ವಿಧಿಸಿತ್ತು.
ಅವಾಂತರಗಳ ಸರಮಾಲೆ..
ಹಳೇಬೀಡಿನಲ್ಲೂ ಏಕಾಏಕಿ ಸುರಿದು ಮಳೆ, ಇನ್ನಿಲ್ಲದ ಅವಾಂತರವನ್ನೇ ಕ್ರಿಯೇಟ್ ಮಾಡಿತ್ತು. ಕೆರೆ ಒತ್ತುವರಿಯಾಗಿದ್ದರಿಂದ ನೀರು ಸರಾಗವಾಗಿ ಹೋಗದೆ ಕಾರಣ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿತ್ತು. ಇನ್ನು ಅಪಾರ ಪ್ರಮಾಣದ ನೀರಿನಿಂದ ರಸ್ತೆಗಳು ಜಲಮಯವಾಗಿದ್ದವು.
ಜನರು ಹೈರಾಣ
ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿದಿದ್ದು, ಜನರನ್ನ ಹೈರಣಾಗಿಸಿತ್ತು. ಅದರಲ್ಲೂ ಚರಂಡಿ ಬ್ಲಾಕ್ ಆಗಿದ್ದರಿಂದ ಕೆಲ ಮನೆಗಳಿಗೆ ಚರಂಡಿ ನೀರು ನುಗ್ಗಿ ವಾಕರಿಕೆ ತರಿಸಿತ್ತು. ಹೀಗಾಗಿ ಗಲೀಜು ನೀರನ್ನು ಹೊರ ಹಾಕಲು ನಿವಾಸಿಗಳು ಹರಸಾಹಸ ಪಡುವಂತಾಗತ್ತು.
ಭಾರಿ ಮಳೆ ನಿರೀಕ್ಷೆ..!
ಇದು ನಿನ್ನೆಯ ಮಳೆ ಕತೆಯಾದರೆ, ನಾಳೆಯಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಭಾರಿ ಮಳೆ ಬೀಳುತ್ತೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಮುಂಗಾರು ಚುರುಕಾಗುತ್ತಿರುವ ಬಗ್ಗೆ ಭವಿಷ್ಯ ನುಡಿದಿದೆ.ಇದರ ಜೊತೆಗೆ ಬಳ್ಳಾರಿ, ದಾವಣಗೆರೆ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಿಗೆಯೆಲ್ಲೋ ಅಲರ್ಟ್ ಡಿಕ್ಲೇರ್ ಮಾಡಲಾಗಿದೆ.



















