ಇತ್ತೀಚೆಗೆ ಹೃದಯಾಘಾತ ಎನ್ನುವುದು ಯುವ ಪೀಳಿಗೆಯ ಜೀವಗಳನ್ನು ಬಲಿ ಪಡೆಯುತ್ತಿರುವುದು ಜೀವಂತ ಹೃದಯಗಳೇ ಛಿದ್ರ ಛಿದ್ರ ಆಗುವಂತಾಗುತ್ತಿದೆ. ಅದರಲ್ಲೂ ಚಂದನವನಕ್ಕೆ ಈ ಹೃದಯಾಘಾತ ಬೆಂಬಿಡದ ಭೂತವಾಗಿದೆ. ಕರ್ನಾಟಕ ರತ್ನ ಅಪ್ಪುನಂತಹ ಜೀವವನ್ನೇ ಈ ಮಾರಿ ಕಿತ್ತುಕೊಂಡು ಹೋಗಿ ಕನ್ನಡಿಗರನ್ನೆಲ್ಲ ಅನಾಥ ಮಾಡಿರುವ ಮಧ್ಯೆಯೇ ಈಗ ಮತ್ತೋರ್ವ ನಟ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಜೋಗಿ ಸಿನಿಮಾ ಖ್ಯಾತಿಯ ನಟ ಉಮೇಶ್ ಅಲಿಯಾಸ್ ಕೋತಿ ಮಂಜ (45) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೃದಯಾಘಾತದಿಂದಾಗಿ ಬುಧವಾರ ರಾತ್ರಿ ನಟ ಕೋತಿ ಮಂಜ ಸಾವನ್ನಪ್ಪಿದ್ದಾರೆ. ಜೋಗಿ ಚಿತ್ರದಲ್ಲಿ ಕೋತಿ ಮಂಜ ಎನುವ ಪಾತ್ರದ ಮೂಲಕ ಉಮೇಶ್ ಖ್ಯಾತಿ ಗಳಿಸಿದ್ದರು. ಜೋಗಿ ನಂತರ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಅಲ್ಲದೇ, ನಿರ್ದೇಶಕ ಜೋಗಿ ಪ್ರೇಮ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಕೋತಿ ಮಂಜ ಪಾರ್ಥಿವ ಶರೀರವನ್ನು ಗವಿಪುರಂ ಗುಟ್ಟಳ್ಳಿಯ ನಿವಾಸದಲ್ಲಿ ಇಡಲಾಗಿದೆ.