ಮಂಗಳೂರು : ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಹಾಗೂ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 32.97 ಎಕರೆ ಹೆಚ್ಚುವರಿ ಭೂಮಿಯ ಅಗತ್ಯವಿದ್ದು, ಈ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಅನುಮೋದಿಸಿದೆ.
ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಮಾಡುವುದಕ್ಕೆ ಭೂಮಿ ನೀಡುವವವರಿಗೆ ಗರಿಷ್ಠ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರದ ನಿಲುವಿಗೆ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಕಾರ್ಯನಿರ್ವಾಹಕ ನಿರ್ದೇಶಕ (ಜೆವಿಸಿ -ಪಿಪಿಪಿ -2) ಅನಾಮಿ ಪಾಂಡೆ ಅವರು ರಾಜ್ಯ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ, ಬಂದರು, ಒಳನಾಡು ಜಲ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ 2025, ಸೆ.9ರಂದು ಬರೆದಿರುವ ಪತ್ರದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.
ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗಾಗಿ 32.97 ಎಕರೆ ಜಮೀನನ್ನು ರಾಜ್ಯ ಸರ್ಕಾರದ ಮೂಲಕ ಸ್ವಾಧೀನಪಡಿಸಿಕೊಳ್ಳಲು ಜಮೀನಿನ ಮೌಲ್ಯ ಅವಶ್ಯದ ಎಲ್ಲಾ ವೆಚ್ಚಗಳನ್ನು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಎಂಜಿಐಎಎಲ್) ಸಂಸ್ಥೆ ಭರಿಸಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ನಿಲುವಿನಿಂದ ಹಿಂದೆ ಸರಿಯದ ರಾಜ್ಯ ಸರ್ಕಾರ !”
ಹಿಂದೆ ಕೇಂದ್ರ ಸರ್ಕಾರ ಭೂಮಿ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿತ್ತು. ಆದರೆ ಭೂಮಿ ಬಿಟ್ಟುಕೊಡಲು ಸ್ಥಳೀಯ ಭೂಮಾಲೀಕರಿಗೆ ಪರಿಹಾರ ನೀಡಬೇಕೆಂಬ ರಾಜ್ಯ ಸರ್ಕಾರ ಕೇಂದ್ರಕ್ಕೆ ತಿಳಿಸಿತ್ತು. ರಾಜ್ಯ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯದೆ ಭೂಮಿ ಕಳೆದು ಕೊಳ್ಳುವವರಿಗೆ ಪರಿಹಾರ ಒದಗಿಸಿಕೊಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಜನಪರ ಕಾಳಜಿಯ ಹೊಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಎಂದಿಗೂ ಜನತೆಯ ಪರವಾಗಿದೆ ಎನ್ನುವುದಕ್ಕೆ ಇದು ಒಂದು ನಿದರ್ಶನವಾಗಿದೆ ಎಂದು ಕಾಂಗ್ರೆಸ್ ನಾಯಕ ಪದ್ಮರಾಜ ಆರ್. ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.