ಚೆನ್ನೈ/ಕೊಯಮತ್ತೂರು: ತಮಿಳುನಾಡಿನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಕೊಯಮತ್ತೂರಿನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಪತಿಯೊಬ್ಬ ಮಹಿಳಾ ಹಾಸ್ಟೆಲ್‌ಗೆ ನುಗ್ಗಿ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆಗೈದಿರುವುದಲ್ಲದೆ, ಶವದೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ವಾಟ್ಸಾಪ್ ಸ್ಟೇಟಸ್ ಹಾಕುವ ಮೂಲಕ ವಿಕೃತಿ ಮೆರೆದಿದ್ದಾನೆ.
ಕೊಲೆಯಾದ ದುರ್ದೈವಿ ಶ್ರೀಪ್ರಿಯಾ, ತಿರುನೆಲ್ವೇಲಿ ಮೂಲದವರಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಬಾಲಮುರುಗನ್‌ನಿಂದ ದೂರವಾಗಿದ್ದರು. ಕೊಯಮತ್ತೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಅಲ್ಲಿನ ಮಹಿಳಾ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು.
ಭಾನುವಾರ (ಡಿ.1) ಮಧ್ಯಾಹ್ನ ಪತ್ನಿ ಶ್ರೀಪ್ರಿಯಾಳನ್ನು ಮಾತನಾಡಿಸಬೇಕೆಂದು ನೆಪ ಹೇಳಿ ಬಾಲಮುರುಗನ್ ಹಾಸ್ಟೆಲ್‌ಗೆ ಬಂದಿದ್ದಾನೆ. ಆದರೆ ಆತ ಬಟ್ಟೆಯೊಳಗೆ ಕುಡುಗೋಲನ್ನು (ಮಚ್ಚು) ಬಚ್ಚಿಟ್ಟುಕೊಂಡು ಬಂದಿದ್ದ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ತಕ್ಷಣವೇ, ಬಾಲಮುರುಗನ್ ತನ್ನಲ್ಲಿದ್ದ ಮಚ್ಚಿನಿಂದ ಶ್ರೀಪ್ರಿಯಾಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಶವದೊಂದಿಗೆ ಸೆಲ್ಫಿ, ವಾಟ್ಸಾಪ್ ಸ್ಟೇಟಸ್!
ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ವಿಚಲಿತನಾಗದ ಹಂತಕ, ಆಕೆಯ ಶವದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, “ಈಕೆ ನನಗೆ ದ್ರೋಹ ಬಗೆದಿದ್ದಾಳೆ” ಎಂದು ಬರೆದು ಆ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿದ್ದಾನೆ. ಈ ದೃಶ್ಯವನ್ನು ಕಂಡ ಹಾಸ್ಟೆಲ್‌ನ ಇತರ ನಿವಾಸಿಗಳು ಭಯಭೀತರಾಗಿ ಹೊರಗೋಡಿ ಬಂದಿದ್ದಾರೆ.
ಕೃತ್ಯ ಎಸಗಿದ ನಂತರ ಬಾಲಮುರುಗನ್ ಅಲ್ಲಿಂದ ಪರಾರಿಯಾಗಲು ಯತ್ನಿಸಲಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸುವವರೆಗೂ ಶವದ ಬಳಿಯೇ ಕಾದು ಕುಳಿತಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪತ್ನಿ ಬೇರೊಬ್ಬನೊಂದಿಗೆ ಸಂಬಂಧ ಹೊಂದಿರಬಹುದು ಎಂಬ ಶಂಕೆಯಿಂದ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ಸರ್ಕಾರದ ವಿರುದ್ಧ ವಿಪಕ್ಷಗಳ ಆಕ್ರೋಶ:
ಈ ಘಟನೆ ತಮಿಳುನಾಡು ರಾಜಕೀಯದಲ್ಲೂ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿರೋಧ ಪಕ್ಷಗಳು ಡಿಎಂಕೆ (DMK) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ ಮತ್ತು ಪೊಲೀಸ್ ಇಲಾಖೆ, “ಇದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಬಿಡಿ ಘಟನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಜಾತಿ ಬೇರೆ ಎಂದು ಪ್ರಿಯಕರನ ಕೊಂದ ಕುಟುಂಬ | ಮೃತದೇಹವನ್ನೇ ಮದುವೆಯಾಗಿ ಅತ್ತೆ ಮನೆ ಸೇರಿದ ಯುವತಿ!


















