ಹೈದರಾಬಾದ್ : ಪ್ರೀತಿ-ಪ್ರೇಮದ ಹೆಸರಿನಲ್ಲಿ ವಿಕೃತ ಮನಸ್ಸಿನ ರಾಕ್ಷಸನೊಬ್ಬ ಎಸಗಿದ ಪಾಪ ಕೃತ್ಯಕ್ಕೆ ಬೆಲೆ ತೆರಲಾಗದೆ 24 ವರ್ಷದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಮದುವೆ ನಿರಾಕರಿಸಿದ ಕಾರಣಕ್ಕಾಗಿ ಆರೋಪಿಯು ಯುವತಿಗೆ ಬಲವಂತವಾಗಿ ತನ್ನ ಎಚ್‌ಐವಿ ಪೀಡಿತ ರಕ್ತವನ್ನು ಇಂಜೆಕ್ಟ್ ಮಾಡಿದ್ದ. ಈ ಘಟನೆಯಿಂದ ಮನನೊಂದಿದ್ದ ಯುವತಿ ಇದೀಗ ಸಾವಿಗೆ ಶರಣಾಗಿದ್ದಾಳೆ.
ಮದುವೆ ಮುರಿದುಬಿದ್ದಿದ್ದೇ ದಾಳಿಗೆ ಕಾರಣ
ಆರೋಪಿ ಮನೋಹರ್ ಮತ್ತು ಸಂತ್ರಸ್ತ ಯುವತಿ ಪರಸ್ಪರ ಸಂಬಂಧಿಕರಾಗಿದ್ದರು. ಆರಂಭದಲ್ಲಿ ಇವರಿಬ್ಬರಿಗೂ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಆದರೆ, ಮನೋಹರ್‌ನ ಪೋಷಕರು ಎಚ್‌ಐವಿ ಪೀಡಿತರಾಗಿದ್ದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಯುವತಿಯ ಪೋಷಕರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮನೋಹರ್‌ನನ್ನು ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಮನೋಹರ್ ಕೂಡ ಎಚ್‌ಐವಿ ಪಾಸಿಟಿವ್ ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಯುವತಿಯ ಕುಟುಂಬ ತಕ್ಷಣವೇ ಮದುವೆಯನ್ನು ರದ್ದುಗೊಳಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಿರಾತಕನ ವಿಕೃತ ಸೇಡು
ಮದುವೆ ನಿಂತುಹೋದ ಸಿಟ್ಟಿನಲ್ಲಿದ್ದ ಮನೋಹರ್, ಮಾರ್ಚ್ 11 ರಂದು ಯುವತಿಯ ಮನೆಗೆ ನುಗ್ಗಿ ತನ್ನ ಎಚ್‌ಐವಿ ಸೋಂಕಿತ ರಕ್ತವನ್ನು ಆಕೆಗೆ ಬಲವಂತವಾಗಿ ಇಂಜೆಕ್ಟ್ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ, ಅಂದಿನಿಂದ ಯುವತಿ ತೀವ್ರ ಆಘಾತಕ್ಕೊಳಗಾಗಿದ್ದಳು.
ಘಟನೆ ನಡೆದು ಒಂದು ತಿಂಗಳು ಕಳೆದರೂ ಯುವತಿ ಆಘಾತದಿಂದ ಚೇತರಿಸಿಕೊಂಡಿರಲಿಲ್ಲ. ಸಮಾಜದಲ್ಲಿ ಎದುರಿಸಬೇಕಾದ ಮುಜುಗರ, ರೋಗದ ಬಗ್ಗೆಯ ಭಯ ಮತ್ತು ಮಾನಸಿಕ ಸಂಕಟದಿಂದ ನರಳುತ್ತಿದ್ದ ಆಕೆ, ಶುಕ್ರವಾರ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಷಯ ಗೊತ್ತಾದ ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. “ಎಚ್‌ಐವಿ ಇಂಜೆಕ್ಟ್ ನಂತರ ಯುವತಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಈ ಮಾನಸಿಕ ಹಿಂಸೆಯೇ ಆಕೆ ಈ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿರಬಹುದು ಎಂದು ನಾವು ಶಂಕಿಸಿದ್ದೇವೆ,” ಎಂದು ಪೋಚರಂ ಐಟಿ ಕಾರಿಡಾರ್ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಇದನ್ನೂ ಓದಿ : ರಕ್ತಸಿಕ್ತ ಶಾಲಾ ಬ್ಯಾಗ್, ಪಾದರಕ್ಷೆ, ಮಿನಾಬ್ ಮಕ್ಕಳ ಫೋಟೋಗಳೊಂದಿಗೆ ಪಾಕ್ ಶಾಂತಿ ಮಾತುಕತೆಗೆ ಹಾರಿದ ಇರಾನ್ ನಿಯೋಗ



















