ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ದುಷ್ಟನೊಬ್ಬ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಕೆಯ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಈಗ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಬಿಹಾರ ಮೂಲದ 29 ವರ್ಷದ ವ್ಯಕ್ತಿಯು ಕುಟುಂಬಸ್ಥರೊಡನೆ ಥಾಣೆಗೆ ಆಗಮಿಸಿದ್ದ. ದುಡಿಯಲು ಬಿಹಾರದಿಂದ ಥಾಣೆಗೆ ಬಂದಿದ್ದ. ಕುಟುಂಬಸ್ಥರಿಗೆ ಬಾಡಿಗೆ ಮನೆಯ ವ್ಯವಸ್ಥೆ ಕೂಡ ಮಾಡಿದ್ದ. ಇವರ ಜತೆ 13 ವರ್ಷದ ಬಾಲಕಿ ಹಾಗೂ ಆಕೆಯ ಕುಟುಂಬಸ್ಥರು ಕೂಡ ಬಂದಿದ್ದರು. ಆದರೆ, ದುಡಿಯಲು ಬಂದಿದ್ದ, ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕಿ ಮೇಲೆಯೇ ವ್ಯಕ್ತಿಯು ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.
“ಬಾಲಕಿಯು ಕ್ಯಾನ್ಸರ್ ನಿಂದ ಬಳಲುತ್ತಿದ್ದಳು. ಆಕೆಗೆ ಚಿಕಿತ್ಸೆ ಕೊಡಿಸಲು ಬಿಹಾರದ ವ್ಯಕ್ತಿಯು ಸಹಾಯ ಮಾಡುತ್ತಿದ್ದ. ಆದರೆ, ಬಾಲಕಿಯು ಮನೆಯಲ್ಲಿ ಒಬ್ಬಳೇ ಇದ್ದಿದ್ದನ್ನು ಗಮನಿಸಿದ್ದ ವ್ಯಕ್ತಿಯು ಅತ್ಯಾಚಾರ ಎಸಗಿದ್ದಾನೆ. ಮೂರು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ” ಎಂದು ಅಸಿಸ್ಟಂಟ್ ಪೊಲೀಸ್ ಕಮಿಷನರ್ ಶೈಲೇಶ್ ಕಾಳೆ ಮಾಹಿತಿ ನೀಡಿದ್ದಾರೆ.
ಕ್ಯಾನ್ಸರ್ ಹಿನ್ನೆಲೆಯಲ್ಲಿ ಬಾಲಕಿಯು ಮುಂಬೈ ಬಳಿಯ ಆಸ್ಪತ್ರೆಯಲ್ಲಿ ಕೀಮೊಥೆರಪಿಗೆ ಒಳಗಾಗುತ್ತಿದ್ದಳು. ಆಕೆಯ ಆರೋಗ್ಯದ ಕುರಿತು ತಪಾಸಣೆ ನಡೆಸುವಾಗ ಗರ್ಭಿಣಿಯಾಗಿರುವುದು ವೈದ್ಯರಿಗೆ ಗೊತ್ತಾಗಿದೆ. ಇದಾದ ಬಳಿಕ ಬಾಲಕಿಯನ್ನು ಕೇಳಿದಾಗ ಆಕೆ ವ್ಯಕ್ತಿಯ ಕೃತ್ಯದ ಬಗ್ಗೆ ತಿಳಿಸಿದ್ದಾಳೆ. ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.