ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರದಲ್ಲಿ ಎದೆ ನಡುಗಿಸುವ ಘಟನೆಯೊಂದು ನಡೆದಿದ್ದು, ತಂದೆಯೊಬ್ಬ ತನ್ನ ಐವರು ಮಕ್ಕಳನ್ನು ನೇಣಿಗೇರಿಸಿ ಹತ್ಯೆ ಮಾಡಲು ಯತ್ನಿಸಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆಯಲ್ಲಿ ಮೂವರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು, ಅದೃಷ್ಟವಶಾತ್ ಇಬ್ಬರು ಗಂಡುಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ ರಾತ್ರಿ ಈ ದುರಂತ ಸಂಭವಿಸಿದೆ. ಮೃತನನ್ನು 35 ವರ್ಷದ ಅಮರನಾಥ್ ರಾಮ್ ಎಂದು ಗುರುತಿಸಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಅಮರನಾಥ್ ತನ್ನ ಐವರು ಮಕ್ಕಳನ್ನು ಮನೆಯಲ್ಲಿದ್ದ ಟ್ರಂಕ್ (ಪೆಟ್ಟಿಗೆ) ಒಂದರ ಮೇಲೆ ನಿಲ್ಲಿಸಿ, ಎಲ್ಲರ ಕುತ್ತಿಗೆಗೆ ಹಗ್ಗ ಬಿಗಿದಿದ್ದಾನೆ. ನಂತರ ತಾನೂ ಕೊರಳಿಗೆ ಹಗ್ಗ ಹಾಕಿಕೊಂಡು ಟ್ರಂಕ್ ಮೇಲಿಂದ ಹಾರಿದ್ದಾನೆ.
ದುರಂತದಲ್ಲಿ ಅನುರಾಧಾ ಕುಮಾರಿ (12), ಶಿವಾನಿ ಕುಮಾರಿ (11) ಮತ್ತು ರಾಧಿಕಾ ಕುಮಾರಿ (7) ಎಂಬ ಮೂವರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದಾರೆ. ಶಿವಂ ಕುಮಾರ್ (6) ಮತ್ತು ಚಂದನ್ ಕುಮಾರ್ (5) ಎಂಬ ಇಬ್ಬರು ಗಂಡುಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬದುಕುಳಿದ ಮಗ ಹೇಳಿದ್ದೇನು?
ಘಟನೆಯನ್ನು ಪ್ರತ್ಯಕ್ಷವಾಗಿ ಕಂಡ ಹಾಗೂ ಸಾವಿನ ದವಡೆಯಿಂದ ಪಾರಾದ ಬಾಲಕ ಶಿವಂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ನಾನು ಮತ್ತು ನನ್ನ ಒಡಹುಟ್ಟಿದವರು ಮನೆಯಲ್ಲಿದ್ದೆವು. ಅಪ್ಪ ಬಾತ್‌ರೂಮ್‌ಗೆ ಹೋಗಿ ಬಂದು, ನಂತರ ನಮ್ಮನ್ನು ಒಬ್ಬೊಬ್ಬರನ್ನಾಗಿ ನೇಣಿಗೆ ಹಾಕಿದರು. ನಾನು ಹೇಗೋ ಕಷ್ಟಪಟ್ಟು ಕುತ್ತಿಗೆಯಲ್ಲಿದ್ದ ಹಗ್ಗವನ್ನು ಬಿಚ್ಚಿಕೊಂಡು ಬದುಕುಳಿದೆ,” ಎಂದು ಹೇಳಿದ್ದಾನೆ. ಗಂಡುಮಕ್ಕಳು ನೇಣಿಗೆ ಶರಣಾಗಲು ನಿರಾಕರಿಸಿದ್ದರಿಂದ ಬದುಕುಳಿದಿರಬಹುದು ಎಂದು ಶಂಕಿಸಲಾಗಿದೆ.
ದುರಂತಕ್ಕೆ ಕಾರಣವೇನು?
ಕಳೆದ ವರ್ಷವಷ್ಟೇ ಅಮರನಾಥ್ ಅವರ ಪತ್ನಿ ಮೃತಪಟ್ಟಿದ್ದರು. ಅಂದಿನಿಂದ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಪತ್ನಿಯ ಅಗಲಿಕೆ ನಂತರ ಐವರು ಮಕ್ಕಳ ಪಾಲನೆಯ ಜವಾಬ್ದಾರಿ ಮತ್ತು ಆರ್ಥಿಕ ಸಂಕಷ್ಟದಿಂದ ಅವರು ಜರ್ಜರಿತರಾಗಿದ್ದರು ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಕ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ. ಬದುಕುಳಿದ ಮಕ್ಕಳ ಹೇಳಿಕೆ ಆಧರಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸಿಡ್ನಿ ಬೀಚ್ ಗೋಲಿಬಾರ್ : 15 ಮಂದಿಯ ಹತ್ಯೆಗೈದಿದ್ದು ಪಾಕಿಸ್ತಾನ ಮೂಲದ ಅಪ್ಪ-ಮಗ!



















