ಮುಂಬೈ: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಪುಟ್ಟ ಹಳ್ಳಿ ಶೆಂಡುರುಸಾನಿ. ಇದರ ಜನಸಂಖ್ಯೆ ಕೇವಲ 1,500. ಆದರೆ, ಕಳೆದ ಮೂರು ತಿಂಗಳಲ್ಲಿ ಈ ಗ್ರಾಮದಲ್ಲಿ ಬರೋಬ್ಬರಿ 27,397 ಮಂದಿ ಜನಿಸಿದ್ದಾರೆ. ಇದು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು.
ಖಂಡಿತಾ ಸಾಧ್ಯವಿಲ್ಲ. ಏಕೆಂದರೆ, ಇದೊಂದು ಬೃಹತ್ ಸೈಬರ್ ವಂಚನೆಯಾಗಿದ್ದು, ರಾಜ್ಯದ ಅತಿದೊಡ್ಡ ಜನನ ಪ್ರಮಾಣಪತ್ರ ಹಗರಣ ಎಂಬುದು ಇದೀಗ ಬಯಲಾಗಿದೆ.
ಯವತ್ಮಾಲ್ ಜಿಲ್ಲೆಯ ಅರ್ನಿ ತಾಲೂಕಿನ ಶೆಂಡುರುಸಾನಿ (Shendurusani) ಗ್ರಾಮ ಪಂಚಾಯಿತಿಯಲ್ಲಿ ಈ ಅಕ್ರಮ ನಡೆದಿದೆ. ಸೆಪ್ಟೆಂಬರ್ ಮತ್ತು ನವೆಂಬರ್ 2025ರ ನಡುವೆ ವಿಳಂಬಿತ ಜನನ ಮತ್ತು ಮರಣ ನೋಂದಣಿಯನ್ನು ಪರಿಶೀಲಿಸಲು ನಡೆಸಿದ ವಿಶೇಷ ಅಭಿಯಾನದ ವೇಳೆ ಈ ಬೃಹತ್ ವಂಚನೆ ಬಯಲಿಗೆ ಬಂದಿದೆ. ಗ್ರಾಮದ ನೈಜ ಜನಸಂಖ್ಯೆಗಿಂತ ಎಷ್ಟೋ ಪಟ್ಟು ಹೆಚ್ಚು ಜನನ ನೋಂದಣಿಯಾಗಿರುವುದನ್ನು ಕಂಡು ಅಧಿಕಾರಿಗಳು ದಂಗಾಗಿದ್ದಾರೆ.
ಸೈಬರ್ ಅಪರಾಧಿಗಳ ಕೈಚಳಕ
ತನಿಖೆಯ ವೇಳೆ ಇದೊಂದು ಹೈಟೆಕ್ ಸೈಬರ್ ವಂಚನೆ ಎಂಬುದು ದೃಢಪಟ್ಟಿದೆ. ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯ (Civil Registration System – CRS) ಲಾಗಿನ್ ಐಡಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಯ ಸಿಆರ್‌ಎಸ್ ಲಾಗಿನ್ ಐಡಿಯು ಮುಂಬೈನಲ್ಲಿ ಮ್ಯಾಪ್ ಆಗಿರುವುದು ಕಂಡುಬಂದಿದ್ದು, ಇದು ಒಂದು ಸಂಘಟಿತ ಸೈಬರ್ ಅಪರಾಧ ಜಾಲದ ಕೃತ್ಯ ಎಂದು ಶಂಕಿಸಲಾಗಿದೆ.
ಘಟನೆ ಬೆಳಕಿಗೆ ಬಂದ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳು ಯವತ್ಮಾಲ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒ ಮಂದಾರ್ ಪಾಟ್ಕಿ ಅವರು ಉಪ ಸಿಇಒ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದ್ದರು. ಶೆಂಡುರುಸಾನಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಮಿತಿಯು, ನೋಂದಣಿಯಾದ ಎಲ್ಲಾ 27,397 ಜನನ ದಾಖಲೆಗಳು ಮತ್ತು 7 ಮರಣ ದಾಖಲೆಗಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ವರದಿ ನೀಡಿದೆ.
ಬಂಗಾಳ ಮತ್ತು ಯುಪಿ ಲಿಂಕ್?
ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ನೋಂದಣಿಯಾಗಿರುವ ಹೆಸರುಗಳಲ್ಲಿ ಶೇ.99ರಷ್ಟು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಜನರಿಗೆ ಸೇರಿವೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾತನಾಡಿರುವ ಸೋಮಯ್ಯ, ಈ ಎಲ್ಲಾ ನಕಲಿ ಜನನ ನೋಂದಣಿ ನಮೂದುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ತನಿಖೆ ಚುರುಕು
ಈ ನಕಲಿ ದಾಖಲೆಗಳನ್ನು ಗುರುತಿನ ವಂಚನೆಗೆ, ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಅಥವಾ ಇನ್ಯಾವುದೇ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸದ್ಯ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: 10 ವರ್ಷ ‘ಸನ್ಯಾಸಿಯಂತೆ ಜೀವನ’ ನಡೆಸಿದ್ದ ಚೀನಾದ ಬಾಡಿಬಿಲ್ಡರ್ ವಾಂಗ್ ಕುನ್ ಹೃದಯಾಘಾತಕ್ಕೆ ಬಲಿ


















