ಯಾದಗಿರಿ : ಕೆ.ಎನ್. ರಾಜಣ್ಣನ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲು ಕಾಂಗ್ರೆಸ್ ಮಹಾನಾಯಕ ಯೋಜನೆ ರೂಪಿಸಿರುವುದಾಗಿ ಸುರಪುರನಲ್ಲಿ ಮಾಜಿ ಸಚಿವ ರಾಜುಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾಗೇಂದ್ರ, ರಾಜಣ್ಣ ಆಯಿತು ಇನ್ನು ಸತೀಶ್ ಜಾರಕಿಹೊಳಿಯ ಸರಧಿ ಬರಲಿದೆ. ನಾನು ಯಾವುದೇ ಮುಜಗರ ಇಲ್ಲದೇ ಹೇಳುತ್ತೇನೆ. ನಮ್ಮ ಸಮುದಾಯದಲ್ಲಿ ನಾವು ಹುಟ್ಟುತ್ತಲೇ ನಾಯಕರು. ನಮ್ಮಲ್ಲಿ ಒಬ್ಬರೇ ನಾಯಕರಾಗಬೇಕು ಎಂದೇನಿಲ್ಲ. ರಾಜಣ್ಣ ಅವರನ್ನು ಮಂತ್ರಿಸ್ಥಾನದಿಂದ ವಜಾಗೊಳಿಸಿದ್ದಾರೆಂದರೇ, ಮುಂದೆ ನಮ್ಮಲ್ಲೇ ಒಬ್ಬರಿಗೆ ಆ ಸ್ಥಾನ ಸಿಗುತ್ತದೆ ಎಂಬರ್ಥ. ನಾವು ಅದಕ್ಕೆ ಯೋಜನೆ ಹಾಕುತ್ತೇವೆ ಎಂದಿದ್ದಾರೆ.
ಮಂತ್ರಿ ಸ್ಥಾನ ಕೊಡುವ ಆಸೆಯನ್ನು ಮೇಲಿನವರು ತೋರಿಸಿ ಬಿಡುತ್ತಾರೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರುವುದಕ್ಕೆ ರಮೇಶಣ್ಣನ (ರಮೇಶ್ ಜಾರಕೀಹೊಳಿ) ಮೇಲೂ ಆ ಕೆಲಸ ಆಗಿತ್ತು. ನಾಗೇಂದ್ರನ (ಮಾಜಿ ಸಚಿವ)ಮೇಲೂ ಆಗಿತ್ತು. ಇಂದು ರಾಜಣ್ಣನಿಗೂ ಅದೆ ಪರಿಸ್ಥಿತಿ ಎದುರಾಗಿದೆ. ಮುಂದೆ ಸತೀಶ್ ಅಣ್ಣನದ್ದೂ ಇದೆ ಸ್ಥಿತಿ ಎಂದು ಹೇಳಿದ್ದಾರೆ.
ಬೇಕಾದರೇ ನಾಳೆ ಸತೀಶ್ ಅಣ್ಣನಿಗೂ ಈ ರೀತಿ ಆದಾಗ, ಕಾಂಗ್ರೆಸ್ ನಲ್ಲಿರುವ 15 ಜನ ವಾಲ್ಮೀಕಿ ಸಮುದಾಯದ ಶಾಸಕರು ರಾಜಣ್ಣನ ಪರ ಹೇಳಿಕೆ ನೀಡಿ, ಆಗ ಕಾಂಗ್ರೆಸ್ ಹೈಕಮಾಂಡ್ ಬಂದು ರಾಜಣ್ಣನಿಗೆ ಸಚಿವ ಸ್ಥಾನ ನೀಡುತ್ತಾರೆ. ವಾಲ್ಮೀಕಿ ನಾಯಕರಿಗೆ ಮುಂದೆ ನೀನೆ ಸಿಎಂ ಎಂದು ಕಿವಿಯಲ್ಲಿ ಹೂವಿಟ್ಟು ಹೇಳುತ್ತಾರೆಂದಿದ್ದಾರೆ.
ಆ ಆಸೆಗೆ ಬಿದ್ದು ಇಂದು ಸಮಾಜವೇ ರಾಜಣ್ಣನನ್ನು ಬಲಿ ಕೊಡುವ ಕೆಲಸ ಮಾಡುತ್ತಿದೆ.
ರಾಜಣ್ಣನನ್ನು ದೆಹಲಿಗೆ ಕರೆದುಕೊಂಡು ಹೋಗುತ್ತಾರೆ. ಸ್ವಲ್ಪ ದಿನ ಹೋಗಲಿ ಎಂದು ರಾಜಣ್ಣನ ಸಮಾಧಾನ ಮಾಡುತ್ತಾರೆ. ಅದಕ್ಕೇನಾದರೂ ರಾಜಣ್ಣ ಸಮಾಧಾನವಾದರೆ ರಾಜಣ್ಣ ರಾಜಕೀಯ ಭವಿಷ್ಯ ಮುಗಿದ ಅಧ್ಯಾಯ ಎಂದು ರಾಜಣ್ಣ ಅವರ ಭವಿಷ್ಯದ ಕಥೆಯನ್ನು ಕಟ್ಟಿದ್ದಾರೆ.
ಸತೀಶಣ್ಣನ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರು ರಾಜಣ್ಣನ ಪರ ಪ್ರತಿಭಟಿಸಬೇಕು. ಹಾಗಾದಲ್ಲಿ ನಾವು ಮುಂದೆ ರಾಜ್ಯದಲ್ಲಿ ರಾಜಕೀಯ ಮಾಡಬಹುದು. ಇಲ್ಲವೆಂದರೆ, ಈ ಸಮಾಜದವರಲ್ಲಿ ಒಗ್ಗಟ್ಟಿಲ್ಲ, ಇವರಲ್ಲಿ ಹೊಂದಾಣಿಕೆ ಇಲ್ಲ, ಇವರನ್ನು ಹೇಗೆ ಬೇಕಾದರೂ ʼಬಲಿಕ ಬಕರʼ ಮಾಡಬಹುದು ಎಂದು ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ.



















